ಅಲೆಕ್ಸ್ ನವಾಲ್ನಿ ರಶ್ಯಾಗೆ ಮರಳಿದರೆ 3.5 ವರ್ಷ ಜೈಲು?: ವಕೀಲರ ಆತಂಕ

Update: 2021-01-14 18:16 GMT

ಮಾಸ್ಕೋ (ರಶ್ಯ), ಜ. 14: ರಶ್ಯದ ಪ್ರತಿಪಕ್ಷ ನಾಯಕ ಹಾಗೂ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಟೀಕಾಕಾರ ಅಲೆಕ್ಸಿ ನವಾಲ್ನಿ ರಶ್ಯಕ್ಕೆ ವಾಪಸಾದರೆ ಮೂರೂವರೆ ವರ್ಷಗಳ ಅವಧಿಯ ಜೈಲುಶಿಕ್ಷೆಗೆ ಒಳಗಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಅವರ ವಕೀಲ ಹೇಳಿದ್ದಾರೆ.

ಅಮಾನತಿನಲ್ಲಿರಿಸಲಾಗಿರುವ ಜೈಲು ಶಿಕ್ಷೆಯ ಶರತ್ತುಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗುವ ಅಪಾಯವನ್ನು ಅವರು ಎದುರಿಸುತ್ತಿದ್ದಾರೆ.

ವಿಷಪ್ರಾಶನಕ್ಕೆ ಗುರಿಯಾಗಿರುವ ನವಾಲ್ನಿ ಈಗ ಜರ್ಮನಿ ರಾಜಧಾನಿ ಬರ್ಲಿನ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 17ರಂದು ನಾನು ರಶ್ಯಕ್ಕೆ ಮರಳುವೆ ಎಂಬ ಹೇಳಿಕೆಯನ್ನು ಅವರು ಬುಧವಾರ ನೀಡಿದ್ದಾರೆ.

 ಹಣ ಅವ್ಯವಹಾರ ಪ್ರಕರಣದಲ್ಲಿ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತಿನಲ್ಲಿರಿಸಲಾಗಿದೆಯಾದರೂ, ಜೈಲಿನ ಶರತ್ತುಗಳ ಪ್ರಕಾರ ಕಳೆದ ವರ್ಷದ ಕೊನೆಯಲ್ಲಿ ಅವರು ಜೈಲಿಗೆ ಹೋಗಿ ಹಾಜರಿ ಹಾಕಬೇಕಾಗಿತ್ತು ಎಂದು ಜೈಲು ಇಲಾಖೆ ಹೇಳಿದೆ. ಹಾಜರಿ ಹಾಕದಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ‘ಬೇಕಾದವರ ರಾಷ್ಟ್ರೀಯ ಪಟ್ಟಿ’ಯಲ್ಲಿ ಸೇರಿಸಲಾಗಿದೆ ಎಂದು ಅವರ ವಕೀಲ ವಾಡಿಮ್ ಕೊಬ್‌ಝೆವ್ ಹೇಳಿದ್ದಾರೆ.

‘‘ಅವರ ಅಮಾನತಿನಲ್ಲಿರುವ ಜೈಲು ಶಿಕ್ಷೆಯನ್ನು ನ್ಯಾಯಾಲಯವು ಬದಲಿಸಿ, ಅವರಿಗೆ ಮೂರೂವರೆ ವರ್ಷಗಳ ಶಿಕ್ಷೆಯನ್ನು ವಿಧಿಸಬಹುದಾಗಿದೆ’’ ಎಂದು ವಕೀಲರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News