‘ಒಗ್ಗಟ್ಟಿನಿಂದ ಮುಂದುವರಿಯುವಂತೆ’ ಅಮೆರಿಕನ್ನರಿಗೆ ಕರೆ ನೀಡಿದ ಟ್ರಂಪ್

Update: 2021-01-14 18:29 GMT

ವಾಶಿಂಗ್ಟನ್, ಜ. 14: ಅಮೆರಿಕ ಸಂಸತ್‌ನ ಎರಡು ಸದನಗಳ ಪೈಕಿ ಒಂದಾಗಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬುಧವಾರ ವಾಗ್ದಂಡನೆಗೆ ಒಳಗಾದ ಬಳಿಕ ಹೇಳಿಕೆಯೊಂದನ್ನು ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಒಗ್ಗಟ್ಟಿನಿಂದ’ ಇರುವಂತೆ ಹಾಗೂ ಹಿಂಸೆಯಿಂದ ದೂರವಿರುವಂತೆ ಅಮೆರಿಕನ್ನರನ್ನು ಒತ್ತಾಯಿಸಿದ್ದಾರೆ. ಆದರೆ, ತಾನು ವಾಗ್ದಂಡನೆಗೆ ಒಳಗಾಗಿರುವುದಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಅವರು ಪ್ರಸ್ತಾಪಿಸಲಿಲ್ಲ.

‘‘ತಕ್ಷಣದ ಭಾವಾವೇಶಗಳನ್ನು ಮೆಟ್ಟಿನಿಲ್ಲುವಂತೆ ಹಾಗೂ ಅಮೆರಿಕದ ಜನತೆಯಾಗಿ ಒಗ್ಗೂಡುವಂತೆ ನಾನು ಎಲ್ಲ ಅಮೆರಿಕನ್ನರಿಗೆ ಕರೆ ನೀಡುತ್ತಿದ್ದೇನೆ. ನಮ್ಮ ಕುಟುಂಬಗಳ ಒಳಿತಿಗಾಗಿ ನಾವು ಒಗ್ಗಟ್ಟಿನಿಂದ ಮುಂದೆ ನಡೆಯೋಣ’’ ಎಂದು ಮುದ್ರಿತ ವೀಡಿಯೊ ಸಂದೇಶವೊಂದರಲ್ಲಿ ಅವರು ಹೇಳಿದರು.

ಕಳೆದ ವಾರ ಅಮೆರಿಕದ ಸಂಸತ್‌ನಲ್ಲಿ ತನ್ನ ಬೆಂಬಲಿಗರು ನಡೆಸಿದ ದಾಂಧಲೆಯನ್ನು ಖಂಡಿಸಿದ ಟ್ರಂಪ್, ‘‘ಹಿಂಸೆಗೆ ಯಾವುದೇ ಸಮರ್ಥನೆಯಿಲ್ಲ. ಯಾವುದೇ ನೆವಗಳಿಲ್ಲ ಮತ್ತು ಯಾವುದೇ ವಿನಾಯಿತಿಗಳಿಲ್ಲ. ಅಮೆರಿಕವು ಕಾನೂನುಗಳ ದೇಶವಾಗಿದೆ’’ ಎಂದು ಹೇಳಿದರು.

ಸಂಸತ್‌ನಲ್ಲಿ ತನ್ನ ಬೆಂಬಲಿಗರು ನಡೆಸಿದ ಹಿಂಸಾಚಾರವನ್ನು ಟ್ರಂಪ್ ಖಂಡಿಸಿರುವುದು ಇದೇ ಮೊದಲ ಬಾರಿ.

‘‘ಕಳೆದ ವಾರ ಹಿಂಸಾಚಾರದಲ್ಲಿ ತೊಡಗಿದವರನ್ನು ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News