ಮುಸ್ಲಿಂ, ದಲಿತ ಮತ್ತು ಆದಿವಾಸಿಗಳ ಪಕ್ಷ ಸ್ಥಾಪಿಸಲಿರುವ ಪಶ್ಚಿಮ ಬಂಗಾಳದ ಮುಸ್ಲಿಂ ಧಾರ್ಮಿಕ ನೇತಾರ

Update: 2021-01-15 08:22 GMT

ಕೊಲ್ಕತ್ತಾ,ಜ.15: ಹೂಗ್ಲಿಯ ಫುರ್ಫುರಾ ಶರೀಫ್‍ನ ಪೀರ್‌ ಝಾದಾ ಆಗಿರುವ ಅಬ್ಬಾಸ್ ಸಿದ್ದೀಖಿ ಅವರು ಜನವರಿ 21ರಂದು ಮುಸ್ಲಿಮರು, ದಲಿತರು ಹಾಗೂ ಆದಿವಾಸಿಗಳ ಹೊಸ ಪಕ್ಷ ಘೋಷಿಸಲಿದ್ದು ಇದು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಒಂದು ಮಹತ್ತರ ಬೆಳವಣಿಗೆಯಾಗುವ ನಿರೀಕ್ಷೆಯಿದೆ.

ಈ ಕುರಿತು ಸ್ವತಃ ಶರೀಫ್ ಮಾಹಿತಿ ನೀಡಿದ್ದಾರೆ. "ರಾಜ್ಯದ ಆದಿವಾಸಿ ಹಾಗೂ ದಲಿತ ಪ್ರತಿನಿಧಿಗಳು ಕಳೆದ ಕೆಲ ತಿಂಗಳುಗಳಿಂದ ನನ್ನನ್ನು ಭೇಟಿಯಾಗಿದ್ದಾರೆ. ಮುಖ್ಯವಾಹಿನಿ ರಾಜಕೀಯ ಪಕ್ಷಗಳೂ ನನ್ನ ಜತೆ ಮಾತನಾಡಿದ್ದಾರೆ.  ವಿಧಾನಸಭಾ ಚುನಾವಣೆಯಲ್ಲಿ 60-80 ಸ್ಥಾನಗಳಲ್ಲಿ ಸ್ಪರ್ಧಿಸುವ ಉದ್ದೇಶವಿದೆ" ಎಂದು ಅವರು ಹೇಳಿದ್ದಾರೆ.

ಸುಮಾರು 15 ದಿನಗಳ ಹಿಂದೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು ಸಿದ್ದೀಖಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಅವರ ಜತೆ  ಕೆಲಸ ಮಾಡುವ ಭರವಸೆ ನೀಡಿರುವುದನ್ನು ಇಲ್ಲಿ  ಸ್ಮರಿಸಬಹುದು. ನಂತರದ ಬೆಳವಣಿಗೆಯೆಂಬಂತೆ ರಾಜ್ಯದ ಸೌತ್ 24 ಪರಗಣ ಹಾಗೂ ಮಿಡ್ನಾಪುರ್ ಮುಂತಾದೆಡೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ವೇಳೆ ಹೊಸ ಪಕ್ಷ ರಚನೆ ಸಾಧ್ಯತೆ ಕುರಿತು ಮಾತೆತ್ತುತ್ತಲೇ ಇದ್ದರು ಎನ್ನಲಾಗಿದೆ.

ಇದೇ ವೇಳೆ, ತಾವು ಉವೈಸಿಯಂತೆ ಮತ ವಿಭಜನೆಗೈದು ಬಿಜೆಪಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದೇನೆ ಎಂಬ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಸ್ವತಃ ಸಿದ್ದೀಖಿಗೆ ಚುನಾವಣೆ ಸ್ಪರ್ಧಿಸುವ ಉದ್ದೇಶವಿಲ್ಲ ಆದರೆ ಕೆಲ ಪ್ರಮುಖ ಮುಸ್ಲಿಂ ಆದಿವಾಸಿ ಹಾಗೂ ದಲಿತ ಪ್ರತಿನಿಧಿಗಳನ್ನು  ಕಣಕ್ಕಿಳಿಸಿ ದಮನಿತರ ದನಿಯಾಗಿಸುವುದು ತನ್ನ ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News