ಮಂಗಳೂರು: ಎಸ್ಡಿಪಿಐಯಿಂದ ಎಸ್ಪಿ ಕಚೇರಿ ಚಲೋ

Update: 2021-01-15 16:20 GMT

ಮಂಗಳೂರು, ಜ.15: ಉಜಿರೆಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಮತಎಣಿಕೆ ಸಂದರ್ಭ ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪದಡಿ ಎಸ್‌ಡಿಪಿಐನ ಮೂವರು ಕಾರ್ಯಕರ್ತರನ್ನು ಬಂಧಿಸಿದ ಪ್ರಕರಣ ಖಂಡಿಸಿ ಎಸ್‌ಡಿಪಿಐ ವತಿಯಿಂದ ದ.ಕ. ಜಿಲ್ಲಾ ಎಸ್ಪಿ ಕಚೇರಿಗೆ ಜಾಥಾ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕ್ಲಾಕ್ ಟವರ್‌ನಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದಲೇ ಎಸ್‌ಡಿಪಿಐನ ಕಾರ್ಯಕರ್ತರು ಜಮಾವಣೆಗೊಳ್ಳ ತೊಡಗಿದ್ದರು. 2:30ರ ಸುಮಾರಿಗೆ ಬಹುತೇಕ ಕಾರ್ಯಕರ್ತರು ಸಮಾವೇಶಗೊಂಡು ಘೋಷಣೆ ಕೂಗುತ್ತಾ ಜಾಥಾ ನಡೆಸಲು ಮುಂದಾದರು.

ಕ್ಲಾಕ್‌ಟವರ್‌ನಿಂದ ಎಸ್ಪಿ ಕಚೇರಿಗೆ ತೆರಳಲು ಮುಂದಾಗಿದ್ದ ಪ್ರತಿಭಟನಾಕಾರರನ್ನು ನಗರದ ಟೌನ್‌ಹಾಲ್ ಸಮೀಪ (ರೈಲ್ವೆ ನಿಲ್ದಾಣಕ್ಕೆ ತೆರಳುವ ಮಾರ್ಗದ ಬಳಿ) ಮಂಗಳೂರು ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ಬಿಗಿ ಭದ್ರತೆಯೊಂದಿಗೆ ತಡೆಹಿಡಿದರು. ನಗರದ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಿಂದ ಕ್ಲಾಕ್‌ಟವರ್‌ವರೆಗೆ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ‘ಅಮಾಯಕ ಯುವಕರ ಬಿಡುಗಡೆ, ನೈಜ ಆರೋಪಿಗಳಾದ ಬಿಜೆಪಿ-ಸಂಘಪರಿವಾರದ ಕಾರ್ಯಕರ್ತರ ಬಂಧನ, ಕರ್ತವ್ಯಲೋಪ ಎಸಗಿದ ಬೆಳ್ತಂಗಡಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನಂದಕುಮಾರ್ ಅಮಾನತು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯುದ್ದಕ್ಕೂ ಪೊಲೀಸರು, ಬೆಳ್ತಂಗಡಿ ಶಾಸಕ, ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ಘೋಷಣೆ ಕೂಗಿದರು. ‘ಎಸ್‌ಡಿಪಿಐ ಝಿಂದಾಬಾದ್’ ಘೋಷಣೆಯು ಏರುದನಿಯಲ್ಲಿ ಕೇಳಿಬರುತ್ತಿತ್ತು. ಬಹುತೇಕ ಕಾರ್ಯಕರ್ತರ ಕೈಯಲ್ಲಿ ಪಕ್ಷದ ಬಾವುಟ ರಾರಾಜಿಸುತ್ತಿದ್ದವು. ಪ್ರತಿಭಟನಾ ಮುಂಚೂಣಿಯಲ್ಲಿ ಹಲವು ಕಾರ್ಯಕರ್ತರು ಆಕ್ರೋಶದ ವಿವಿಧ ಬರಹಗಳ ಬ್ಯಾನರ್, ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸಿದರು.

ಕ್ಲಾಕ್ ಟವರ್ ಬಳಿಯೇ ಜಮಾವಣೆಗೊಂಡಿದ್ದ ಕಾರ್ಯಕರ್ತರು ಸುಮಾರು ಒಂದು ಗಂಟೆಯವರೆಗೆ ಪ್ರತಿಭಟನೆ ನಡೆಸಿದರು. ಬಳಿಕ 3:30ರ ಸುಮಾರಿಗೆ ಎಸ್ಪಿ ಕಚೇರಿಯತ್ತ ಹೆಜ್ಜೆ ಹಾಕತೊಡಗಿದರು. ಅತ್ತ ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸನ್ನದ್ಧರಾಗಿದ್ದರು. ಕ್ಲಾಕ್ ಟವರ್‌ನಿಂದ 100 ಮೀಟರ್ ದೂರದಲ್ಲಿ ಟೌನ್‌ಹಾಲ್ ಬಳಿ ರಸ್ತೆಗೆ ಅಡ್ಡಲಾಗಿ ಪೊಲೀಸರು ಬ್ಯಾರಿಕೇಡ್ ಅವಳವಡಿಸಿ, ಪ್ರತಿಭಟನಾಕಾರರ ಜಾಥಾ ತಡೆಹಿಡಿದರು.

ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಪೊಲೀಸರು ರಸ್ತೆಗೆ ಅಡ್ಡಲಾಗಿ ನಿಂತಿದ್ದರು. ಪ್ರತಿಭಟನಾಕಾರರು ಸಮೀಪಿಸುತ್ತಿದ್ದಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ, ಕೇಂದ್ರ ವಿಭಾಗದ ಎಸಿಪಿ ಎಂ.ಜಗದೀಶ್ ಪ್ರತಿಭಟನಾಕಾರರ ಮನವೊಲಿಸಿ, ಅದೇ ಜಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಲು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯುದ್ದಕ್ಕೂ ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ನಂತರ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಮನವಿ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದರು. ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ತಲುಪಿಸುವುದಾಗಿ ಆಯುಕ್ತರು ಭರವಸೆ ನೀಡಿದರು.

ಪ್ರತಿಭಟನೆಯುದ್ದಕ್ಕೂ ಪಕ್ಷದ ಮುಖಂಡರು ಕಾರ್ಯಕರ್ತರಲ್ಲಿ ಶಾಂತಿ ಕಾಯ್ದುಕೊಳ್ಳಲು ಮನವಿ ಮಾಡುತ್ತಿದ್ದುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News