ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಗುಜರಾತ್ ಹೈಕೋರ್ಟ್ ಮೊರೆ ಹೋದ ಹಿಂದೂ ಯುವಕ

Update: 2021-01-15 11:51 GMT

ಅಹ್ಮದಾಬಾದ್,ಜ.15: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸಿರುವ 32 ವರ್ಷದ ಹಿಂದು ಯುವಕನೊಬ್ಬ ತಾನು ಈ ನಿಟ್ಟಿನಲ್ಲಿ ಭರೂಚ್ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಸೂಚಿಸಬೇಕೆಂದು ಕೋರಿ ಗುಜರಾತ್ ಹೈಕೋರ್ಟ್ ಕದ ತಟ್ಟಿದ್ದಾನೆ. ತಾನು ಅರ್ಜಿ ಸಲ್ಲಿಸಿ ಒಂದು ವರ್ಷದ ಮೇಲಾಗಿದೆ ಎಂದು ಆತ ತನ್ನ ಅಪೀಲಿನಲ್ಲಿ ತಿಳಿಸಿದ್ದಾನೆ.

ಜಿಗ್ನೇಶ್ ಪಟೇಲ್ ಎಂಬ ಯುವಕನ ಅರ್ಜಿಯನ್ನು ಭರೂಚ್ ಕಲೆಕ್ಟರ್ ಅವರು ತಡೆ ಹಿಡಿದು  ಒಂದು ವರ್ಷವೇ ಕಳೆದಿದೆ ಎಂದು ಆತನ ವಕೀಲರು ಹೇಳಿದ್ದಾರೆ. ಈ ಕುರಿತಂತೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಫೆಬ್ರವರಿ 2020ರಲ್ಲಿ ಸಲ್ಲಿಸಿರುವ ತನಿಖಾ ವರದಿ ಅರ್ಜಿದಾರನಿಗೆ ಪೂರಕವಾಗಿರುವ ಹೊರತಾಗಿಯೂ ಆತನಿಗೆ ಮತಾಂತರಕ್ಕೆ ಅನುಮತಿ ನೀಡಲಾಗಿಲ್ಲ ಎಂದು ವಕೀಲರು ದೂರಿದ್ದಾರೆ. ಪಟೇಲ್ ಅರ್ಜಿಯ ಕುರಿತಂತೆ ಆದಷ್ಟು ಬೇಗ, ಅಂದರೆ ಎಂಟು ವಾರಗಳೊಳಗಾಗಿ ತೀರ್ಮಾನ ಕೈಗೊಳ್ಳುವಂತೆ ತಮ್ಮ ಇತ್ತೀಚಿಗಿನ ಆದೇಶದಲ್ಲಿ ಜಸ್ಟಿಸ್ ಬೇಲಾ ತ್ರಿವೇದಿ ಜಿಲ್ಲಾ ಕಲೆಕ್ಟರ್ ಅವರಿಗೆ ಸೂಚಿಸಿದ್ದಾರೆ.

ಜಿಗ್ನೇಶ್‍ಗೆ ಮತಾಂತರಗೊಳ್ಳಲು ಯಾವುದೇ  ಒತ್ತಡವಿಲ್ಲ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವರದಿ ಹೇಳಿದೆ. ಆತ ತನ್ನ ಅಫಿಡವಿಟ್‍ನಲ್ಲಿ ತಾನು ಇಸ್ಲಾಂನತ್ತ ಆಕರ್ಷಿತನಾಗಿದ್ದೇನೆ ಹಾಗೂ ಮತಾಂತರಗೊಳ್ಳಲು ಬಯಸಿದ್ದೇನೆ, ಕಳೆದ ಆರು ವರ್ಷಗಳಿಂದ ಮುಸ್ಲಿಂ  ಪದ್ಧತಿಯಂತೆ ಬದುಕುತ್ತಿದ್ದೇನೆ, ರಮ್ಝಾನ್ ಉಪವಾಸ ಆಚರಿಸುತ್ತಿದ್ದೇನೆ, ನಮಾಝ್ ಸಲ್ಲಿಸುತ್ತಿದ್ದೇನೆ ಎಂದೂ ಆತ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News