​ಮಂಗಳೂರು: ಆರೋಗ್ಯ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಒತ್ತಾಯ

Update: 2021-01-15 12:04 GMT

ಮಂಗಳೂರು, ಜ.15: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸ ಬೇಕು. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶೇ.40ಕ್ಕೂ ಹೆಚ್ಚು ಹುದ್ದೆಗಳನ್ನು ಸರಕಾರ ಭರ್ತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘದ ಅಧ್ಯಕ್ಷ ಎ. ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಆರೋಗ್ಯ ಇಲಾಖೆಯ ನೌಕರರಿಗೆ ಪ್ರತೀ ತಿಂಗಳು ಮೊದಲ ದಿನಾಂಕದಂದು ಸಮಯಕ್ಕೆ ಸರಿಯಾಗಿ ವೇತನ ಪಾವತಿ ಆಗುವಂತೆ ನಮ್ಮ ಸಂಘದ ಮುಖೇನ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗುವುದು. ಪ್ರಯೋಗಶಾಲಾ ತಂತ್ರಜ್ಞರು, ಕ್ಷ-ಕಿರಣ ತಂತ್ರಜ್ಞರು, ಫಾರ್ಮಾಸಿಸ್ಟ್, ಇ.ಸಿ.ಜಿ. ಟೆಕ್ನಿಷಿಯನ್ ಮತ್ತು ಶೂಶ್ರೂಷಾಧಿಕಾರಿಗಳು ಎಲ್ಲಾ ಆಸ್ಪತ್ರೆಗಳಲ್ಲಿ ಗುತ್ತಿಗೆಯ ಆಧಾರದ ಮೇಲೆ ಆಯಾ ಹುದ್ದೆಗಳಿಗೆ ಮೂಲ ವೇತನವನ್ನು ಸಂಚಿತ ವೇತನವನ್ನಾಗಿ ಪಾವತಿಸಲು ಸಂಘ ಒತ್ತಾಯ ಮಾಡುತ್ತದೆ ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಈಗಾಗಲೇ 15 ರಿಂದ 20 ವರ್ಷಗಳ ಕಾಲ ಗುತ್ತಿಗೆ, ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು. ಮುಂದಿನ ದಿನಗಳಲ್ಲಿ ನೇಮಕಾತಿಗಳಲ್ಲಿ ತಾತ್ಕಾಲಿಕ ನೇಮಕಾತಿಗಳ ಬದಲಾಗಿ ಖಾಯಂ ನೇಮಕಾತಿಗಳನ್ನು ಮಾಡುವುದರ ಕುರಿತು ರಾಜ್ಯ ಸರಕಾರದ ಗಮನಸೆಳೆಯಲಾಗುವುದು. ಪೆಬ್ರವರಿಯಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘಟನೆಯ ಸದಸ್ಯರನ್ನು ಒಳಗೊಂಡ ರಾಜ್ಯ ಸಮ್ಮೇಳನ ಆಯೋಜಿಸುವ ಚಿಂತನೆ ಇದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ಕ್ಷೇತ್ರ ಸಿಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿದ್ದಲ್ಲಿ ಹಲವಾರು ತೊಂದರೆಗಳು ಎದುರಾಗುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ತಾಂತ್ರಿಕ ಸಿಬಂದಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ದಿನದ24 ಗಂಟೆ ಕೆಲಸ ನಿರ್ವಹಿಸಬೇಕಾ ಗುತ್ತದೆ. ಆರೋಗ್ಯ ಇಲಾಖಾ ಸಿಬಂದಿ ಹಾಜರಾತಿಗಾಗಿ ಕೆಲಸ ಮಾಡದೆ ಸಾರ್ವಜನಿಕ ಸೇವೆಗಾಗಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ಬಯೋಮೆಟ್ರಿಕ್ ವ್ಯವಸ್ಥೆಯು ಸಿಬಂದಿಯಲ್ಲಿ ಕರ್ತವ್ಯದ ಕೊರತೆ ಮತ್ತು ಶ್ರದ್ಧೆ ಕಡಿಮೆಯಾಗಿ ಸಾರ್ವಜನಿಕರಿಗೆ ತೊಂದರೆ ಆಗಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಆರ್. ಶ್ರೀನಿವಾಸ್, ಮ.ಸ. ನಂಜುಡಸ್ವಾಮಿ, ಜಯಂತ, ಪ್ರಕಾಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News