ಲಾಬಿ- ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ: ನಳಿನ್ ಕುಮಾರ್ ಕಟೀಲು

Update: 2021-01-15 12:52 GMT

ಮಂಗಳೂರು, ಜ. 15: ಅಧಿಕಾರ ಬೇಡ ಎಂದು ಪಕ್ಷ ಸಂಘಟನೆಗೆ ಮುಂದಾಗುವವರಿಗೆ ಕರೆದು ಅಧಿಕಾರ ನೀಡುವುದು ಬಿಜೆಪಿ ಕ್ರಮ. ಯಾವುದೇ ಲಾಬಿ, ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಆದರೆ ಪಕ್ಷಕ್ಕಾಗಿ ದುಡಿದ ಹಿರಿಯರಿಗೂ ಸೂಕ್ತ ಸಂದರ್ಭದಲ್ಲಿ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನೂತನ ಸಚಿವ ಅಂಗಾರ ಅವರಿಗೆ ಜಿಲ್ಲಾ ಬಿಜೆಪಿಯಿಂದ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ ಬಿಜೆಪಿ ಮೊದಲು ಬೇರೂರಿದ್ದೇ ಸುಳ್ಯದಲ್ಲಿ. ಸುಳ್ಯ ಕ್ಷೇತ್ರ ಬಿಜೆಪಿಯ ಪ್ರಯೋಗಶಾಲೆಯಾಗಿದೆ. 1989ರಿಂದಲೂ ಅಂಗಾರ ಅವರು ಬಿಜೆಪಿಯನ್ನು ಅಲ್ಲಿ ತಳಮಟ್ಟದಿಂದ ಸಂಘಟಿಸಿದ್ದಾರೆ. ಸತತ ಆರು ಬಾರಿ ಶಾಸಕರಾದರೂ ನಿಗರ್ವಿ, ಸರಳ, ಸಜ್ಜನಿಕೆಯ ಅಂಗಾರ ಅವರು ಇತರರಿಗೆ ಆದರ್ಶ ರಾಜಕಾರಣಿ. ಆದ್ದರಿಂದಲೇ ಅಧಿಕಾರ ಅಂಗಾರ ಅವರನ್ನು ಹುಡುಕಿಕೊಂಡು ಬಂದಿದೆ. ಇನ್ನು ಮುಂದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವರಾದ ಅಂಗಾರ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ತುಳುನಾಡಿದ ಕಾರಣಿಕ ಪುರುಷ ಕೋಟಿ ಚೆನ್ನಯರಂತೆ ದುಡಿಯಲಿದ್ದಾರೆ ಎಂದು ನಳಿನ್ ಕುಮಾರ್ ಹೇಳಿದರು.

ಕಾಂಗ್ರೆಸ್‌ಗೆ ಜನಬೆಂಬಲ ಇಲ್ಲ. ಬಿಜೆಪಿಯಲ್ಲಿ ಸಾಮಾನ್ಯರಿಗೂ ಸಚಿವ ಸ್ಥಾನ ನೀಡಿರುವುದನ್ನು ನೋಡಿ ಕಾಂಗ್ರೆಸಿಗರಿಗೆ ದಿಗಿಲು ಉಂಟಾಗಿದೆ. ಕಾಂಗ್ರೆಸ್ ಇಂದಿರಾ, ರಾಜೀವ್, ಸಂಜಯ ಗಾಂಧಿ ಇವರ ತಿಥಿ ಮಾಡುವುದರಲ್ಲೇ ಕಚೇರಿಯಲ್ಲಿ ಕಾಲ ಕಳೆಯುತ್ತಿದೆ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಅವರೇ ಎರಡೂವರೆ ವರ್ಷ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದವರು ಹೇಳಿದರು.

ಶಾಸಕರಾದ ವೇದವ್ಯಾಸ್ ಕಾಮತ್, ಪ್ರತಾಪ್‌ಸಿಂಹ ನಾಯಕ್, ಮೇಯರ್ ದಿವಾಕರ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಪ್ರಭಾರಿ ರಾಜೇಶ್ ಉಪಸ್ಥಿತರಿದ್ದರು.

ಸಚಿವ ಸ್ಥಾನ ವಿಳಂಬವಾದ ಬಗ್ಗೆ ಬೇಸರವಿಲ್ಲ: ಅಂಗಾರ

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಅಂಗಾರ, ನನಗೆ ವಿಳಂಬವಾಗಿ ಸಚಿವ ಸ್ಥಾನ ಸಿಕ್ಕಿದರೂ ಬೇಸರವಿಲ್ಲ. ನನ್ನನ್ನು ಆರ್‌ಎಸ್‌ಎಸ್ ‌ಹಾಗೂ ಪಕ್ಷ ಈ ಹಂತಕ್ಕೆ ಬೆಳೆಸಿದೆ. ಜನತೆಯ ನಂಬಿಕೆಗೆ ಧಕ್ಕೆಯಾಗದಂತೆ ಸಚಿವನಾಗಿ ಕರ್ತವ್ಯ ನಿರ್ವಹಿಸುತ್ತೇ ನಾನು ಪಕ್ಷ ನಿಷ್ಠನಾಗಿದ್ದು, ಎಂದೂ ಅಧಿಕಾರಕ್ಕಾಗಿ ಹಾತೊರೆದಿಲ್ಲ ಎಂದು ಹೇಳಿದರು.

ಭಾವುಕರಾದ ಸಚಿವ ಅಂಗಾರ

ರಾಜ್ಯ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ದ.ಕ. ಜಿಲ್ಲೆಗೆ ಆಗಮಿಸಿದ ಅಂಗಾರಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯರ್ತರು ಭವ್ಯ ಸ್ವಾಗತ ನೀಡಿದರು.

ಬಳಿಕ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅಂಗಾರ ಅವರು, ನಂತರ ಸಂಘನಿಕೇತನಕ್ಕೆ ತೆರಳಿದರು. ಸಂಘನಿಕೇತನದಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಹೆಡ್ಗೇವಾರ್ ಭಾವಚಿತ್ರಕ್ಕೆ ನಮಿಸಿ ಭಾಷಣ ಆರಂಭಿಸುತ್ತಿದ್ದಂತೆ ಭಾವುಕರಾದರು. ಬಳಿಕ ಸಂಘದ ಕಾರ್ಯಕರ್ತನಾಗಿ ತನ್ನ ಬಾಲ್ಯದ ಒಡಾಟವನ್ನು ನೆನಪಿಸಿಕೊಂಡರು.

ನಾನು ಹಾಗೂ ಅಂಗಾರ ಅವರು ಆರ್‌ಎಸ್‌ಎಸ್ ಸಂಘ ಶಿಕ್ಷಾ ವರ್ಗವನ್ನು ಒಟ್ಟಾಗಿಯೇ ಪೂರೈಸಿದ್ದೆವು. ಮೊದಲ ಬಾರಿ ಅವರು ಸೋತಾಗಲೂ ಐದು ವರ್ಷಗಳ ಕಾಲ ಹಳ್ಳಿಗಳಿಗೆ ಸುತ್ತಾಡಿ ಪಕ್ಷ ಸಂಘಟನೆ ಮಾಡಿದರು. ಅದರ ಫಲವಾಗಿ ನಂತರ ಇಲ್ಲಿವರೆಗೆ ನಿರಂತರವಾಗಿ ಗೆದ್ದುಕೊಂಡೇ ಬಂದಿದ್ದಾರೆ. ನಾನು ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದಾಗ ಬಹಳ ನೋವಿನಲ್ಲಿ ಅಧಿಕಾರ ಸ್ವೀಕರಿ ಸಿದ್ದೆ. ಆಗ ಸಚಿವ ಸಂಪುಟ ವಿಸ್ತರಣೆಯಾಗಿ ಹಿರಿಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತಾದರೂ, ಸಿಗದ ಬೇಸರ ನನ್ನಲ್ಲಿತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News