ಉಡುಪಿ ಜಿಲ್ಲೆಯ ಎಂಟು ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ

Update: 2021-01-15 14:04 GMT

ಉಡುಪಿ, ಜ.15: ಶುಕ್ರವಾರ ಉಡುಪಿ ಜಿಲ್ಲೆಯ ಎಂಟು ಮಂದಿಯಲ್ಲಿ ಕೋವಿಡ್- 19 ಸೋಂಕು ಪತ್ತೆಯಾಗಿದೆ. ದಿನದಲ್ಲಿ 19 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವ ಸಂಖ್ಯೆ 41ಕ್ಕಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ ಎಂಟು ಮಂದಿಯಲ್ಲಿ ಐವರು ಪುರುಷರಾದರೆ ಮೂವರು ಮಹಿಳೆಯರು. ಆರು ಮಂದಿ ಉಡುಪಿ ತಾಲೂಕಿನವರಾದರೆ, ಒಬ್ಬರು ಕಾರ್ಕಳ ತಾಲೂಕಿನವರು. ಮತ್ತೊಬ್ಬರು ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದವರು. ಎಂಟು ಮಂದಿಯಲ್ಲಿ ಆರು ಮಂದಿ ಹೋಮ್ ಐಸೋಲೇಷನ್ನಲ್ಲಿದ್ದಾರೆ ಎಂದವರು ವಿವರಿಸಿದರು.

19 ಮಂದಿ ಬಿಡುಗಡೆ: ಗುರುವಾರ ಜಿಲ್ಲೆಯ ಒಟ್ಟು 18 ಮಂದಿ ಚಿಕಿತ್ಸೆ ಬಳಿಕ ಕೊರೋನಾದಿಂದ ಮುಕ್ತಿ ಪಡೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತಿ ಪಡೆದವರ ಒಟ್ಟು ಸಂಖ್ಯೆ ಈಗ 22,983ಕ್ಕೇರಿದೆ ಎಂದರು.

1587 ಮಂದಿ ನೆಗೆಟಿವ್: ಗುರುವಾರ ಜಿಲ್ಲೆಯ ಒಟ್ಟು 1595 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1587 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಎಂಟು ಮಂದಿಯಲ್ಲಿ ಮಾತ್ರ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈ ಮೂಲಕ ಇದುವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,213 ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,19,755 ಮಂದಿ ಕೋವಿಡ್ ಪರೀಕ್ಷೆಗೊಳ ಗಾಗಿದ್ದಾರೆ. ಇವರಲ್ಲಿ 2,96,542 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 23,213 ಮಂದಿ ಈವರೆಗೆ ಪಾಸಿಟಿವ್ ಬಂದಿದ್ದರೆ, 22,983 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ಗೆ ಯಾರೂ ಬಲಿಯಾಗಿಲ್ಲ. ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 189ರಲ್ಲೇ ಇದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News