ಉಡುಪಿ: ಚೂರ್ಣೋತ್ಸವದೊಂದಿಗೆ ಸಪ್ತೋತ್ಸವ ಸಂಪನ್ನ

Update: 2021-01-15 14:15 GMT

ಉಡುಪಿ, ಜ.15: ಉಡುಪಿ ಶ್ರೀಕೃಷ್ಣ ಮಠದ ವಾರ್ಷಿಕ ಜಾತ್ರೋತ್ಸವ ಎಂದೇ ಕರೆಯಲಾಗುವ, ಪರ್ಯಾಯ ಅದಮಾರು ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಳೆದೊಂದು ವಾರದಿಂದ ನಡೆದ ಸಪ್ತೋತ್ಸವ, ಇಂದು ಹಗಲು ರಥೋತ್ಸವ, ಚೂರ್ಣೋತ್ಸವದೊಂದಿಗೆ ಸಂಪನ್ನಗೊಂಡಿತು.

ದ್ವೈತಮತ, ಮಧ್ವ ಸಿದ್ಧಾಂತದ ಪ್ರತಿಪಾದಕರಾದ ಶ್ರೀಮಧ್ವಾಚಾರ್ಯರು ಸುಮಾರು 750 ವರ್ಷಗಳ ಹಿಂದೆ ಮಕರ ಸಂಕ್ರಮ ಣದ ದಿನದಂದೇ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇಲ್ಲಿ ಒಂದು ವಾರ ಕಾಲ ಸಪ್ತೋತ್ಸವವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ (ಜ.14) ದಿನದಂದು ರಾತ್ರಿ ಮೂರು ತೇರು ಗಳ ಉತ್ಸವ ನಡೆದು ಮರುದಿನ ಹಗಲು ರಥೋತ್ಸವದೊಂದಿಗೆ ಇದು ಮುಕ್ತಾಯಗೊಳ್ಳುತ್ತದೆ.

ಮಹಾಪೂಜೆಯ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಬಲಿಮೂರ್ತಿ ಯನ್ನು ಚಿನ್ನದ ಪಾಲಕ್ಕಿಯಲ್ಲಿ ತಂದು ಸ್ವಾಗತ ಗೋಪುರದ ಎದುರು ನಿಲ್ಲಿಸಲಾದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಎಲ್ಲಾ ಸ್ವಾಮೀಜಿಗಳು ರಥವನ್ನೇರಿ ಮಂಗಳಾರತಿ ಬೆಳಗಿದ ಬಳಿಕ ರಥವನ್ನು ರಥಬೀದಿಗೆ ಒಂದು ಸುತ್ತು ಪ್ರದಕ್ಷಿಣೆ ತರಲಾಯಿತು. ಭಕ್ತರೊಂದಿಗೆ ಮಠಾಧೀಶರು ಬ್ರಹ್ಮರಥವನ್ನು ಎಳೆದರು.

ಉತ್ಸವದ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ಮೂರ್ತಿಗಳನ್ನು ಮಠಕ್ಕೆ ತಂದು ಮಧ್ವಮಂಟಪದಲ್ಲಿ ತೊಟ್ಟಿಲು ಪೂಜೆ ಸಹಿತ ಅಷ್ಟಾವ ಧಾನ ನಡೆಯಿತು. ಬಳಿಕ ದೇವರಿಗೆ ಸಮರ್ಪಿತ ಓಕುಳಿಯನ್ನು ಎಲ್ಲಾ ಯತಿಗಳೊಂದಿಗೆ ಭಕ್ತರು ಹಚ್ಚಿಕೊಂಡು ಮಧ್ವ ಸರೋವರ ದಲ್ಲಿ ಅವಭೃತ ಸ್ನಾನ ಮಾಡಿದರು. ನೂರಾರು ಮಂದಿ ಭಕ್ತರು ಇದರಲ್ಲಿ ಪಾಲ್ಗೊಂಡರು. ಬಳಿಕ ಅನ್ನಸಂತಪರ್ಣೆಗಾಗಿ ಸಿದ್ಧಪಡಿಸ ಲಾದ ಅನ್ನದ ರಾಶಿಗೆ ಪಲ್ಲಪೂಜೆ ನಡೆಯಿತು. ಸಾವಿರಾರು ಮಂದಿ ಇಂದಿನ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

ಚೂರ್ಣೋತ್ಸವದಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರೊಂದಿಗೆ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News