“ಚೀನಾದಲ್ಲಿ ಉಯಿಘರ್ ಮುಸ್ಲಿಮರ ಜನಾಂಗೀಯ ಹತ್ಯೆ ನಡೆಸಿರುವ ಸಾಧ್ಯತೆ ಇದೆ”

Update: 2021-01-15 15:05 GMT

ವಾಶಿಂಗ್ಟನ್, ಜ. 15: ಚೀನಾವು ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಉಯಿಘರ್ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಯಾಗಿಸಿ ಜನಾಂಗೀಯ ಹತ್ಯೆ ನಡೆಸಿರುವ ಸಾಧ್ಯತೆಯಿದೆ ಎಂದು ಅವೆುರಿಕದ ಸಂಸತ್ತು ಕಾಂಗ್ರೆಸ್ ನೇಮಿಸಿರುವ ಆಯೋಗವೊಂದು ತನ್ನ ವರದಿಯಲ್ಲಿ ತಿಳಿಸಿದೆ.

 ಉಯಿಘರ್ ಜನಾಂಗೀಯರು ತಮ್ಮ ಮೂಲಭೂತ ಮಾನವಹಕ್ಕುಗಳನ್ನು ಚಲಾಯಿಸಿರುವುದಕ್ಕಾಗಿ ಚೀನಾ ಸರಕಾರ ಮತ್ತು ಕಮ್ಯುನಿಸ್ಟ್ ಪಕ್ಷಗಳು ಅವರ ವಿರುದ್ಧ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಸೆನ್ಸಾರ್‌ಶಿಪ್ ವಿಧಿಸುತ್ತಿವೆ, ಬೆದರಿಕೆಯೊಡ್ಡುತ್ತಿವೆ ಮತ್ತು ಅವರನ್ನು ಸ್ವೇಚ್ಛಾಚಾರದಿಂದ ಬಂಧಿಸುತ್ತಿವೆ ಎಂದು ಕಾಂಗ್ರೆಶ್ಶನಲ್ ಎಕ್ಸೆಕ್ಯೂಟಿವ್ ಕಮಿಶನ್ ಆನ್ ಚೀನಾ (ಸಿಇಸಿಸಿ) ಬಿಡುಗಡೆ ಮಾಡಿರುವ ವರದಿ ಹೇಳಿದೆ.

‘‘ಚೀನಾದ ಈ ರೀತಿಯ ದಮನ ನೀತಿಯು ದೇಶದ ಬೇರೆ ಯಾವುದೇ ಭಾಗಕ್ಕಿಂತಲೂ ಹೆಚ್ಚಾಗಿ ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ವಲಯ (ಎಕ್ಸ್‌ಯುಎಆರ್)ದಲ್ಲಿ ಎದ್ದು ಕಾಣುತ್ತಿದೆ. ಅಲ್ಲಿ ಮಾನವತೆಯ ವಿರುದ್ಧ ಅಪರಾಧ ಹಾಗೂ ಸಂಭಾವ್ಯ ಜನಾಂಗೀಯ ಹತ್ಯೆ ನಡೆಯುತ್ತಿರಬಹುದು ಎನ್ನುವುದನ್ನು ಸೂಚಿಸುವ ಹೊಸ ಪುರಾವೆಗಳು ಹೊರಬರುತ್ತಿವೆ’’ ಎಂದು ಗುರುವಾರ ಬಿಡುಗಡೆಗೊಂಡ ವರದಿ ಹೇಳಿದೆ.

 ‘‘ಇದೇ ರೀತಿಯ ದಮನ ಕಾರ್ಯಾಚರಣೆಯು ಹಾಂಕಾಂಗ್‌ನಲ್ಲೂ ನಡೆಯುತ್ತಿರುವುದಕ್ಕೆ ಪುರಾವೆಗಳು ಲಭಿಸಿವೆ. ಅಲ್ಲಿ ‘ಒಂದು ದೇಶ, ಎರಡು ವ್ಯವಸ್ಥೆ’ ಎಂಬ ಆಡಳಿತ ಮಾದರಿಯನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ’’ ಎಂದು ವರದಿ ತಿಳಿಸಿದೆ.

ಚೀನಾದ ಅಧಿಕಾರಿಗಳು ಉಯಿಘರ್ ಮತ್ತು ಇತರ ಬುಡಕಟ್ಟು ಮುಸ್ಲಿಮ್ ಗುಂಪುಗಳ ಸದಸ್ಯರನ್ನು ಸ್ವೇಚ್ಛಾಚಾರದಿಂದ ಬಂಧಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಆದರೆ, ಉದ್ಯೋಗ ತರಬೇತಿ ಕೊಡುವುದಕ್ಕಾಗಿ ಹಾಗೂ ಭಯೋತ್ಪಾದನೆ ನಿಗ್ರಹ ಉದ್ದೇಶಗಳಿಗಾಗಿ ಅವರನ್ನು ಶಿಬಿರಗಳಲ್ಲಿ ಇಡಲಾಗುತ್ತಿದೆ ಎಂದು ಸರಕಾರಿ ಮಾಧ್ಯಮಗಳು ಹೇಳಿಕೊಳ್ಳುತ್ತಿವೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News