ಉಡುಪಿ : ಎಸೆಸೆಲ್ಸಿ ವಿಜ್ಞಾನ ವಿಷಯದಲ್ಲಿ ಫೋನ್ ಇನ್ ಕಾರ್ಯಕ್ರಮ

Update: 2021-01-15 15:30 GMT

ಉಡುಪಿ, ಜ.15: ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆ ಗಾಗಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಫೋನ್ ಇನ್ ಕಾರ್ಯಕ್ರಮವು ಇಂದು ಉಡುಪಿ ಸರಕಾರಿ ಪ್ರೌಢ ಶಾಲೆ ಬೋರ್ಡ್ ಹೈಸ್ಕೂಲ್‌ನಲ್ಲಿ ಜರಗಿತು.

ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತು ಜಿಪಂ ಸಿಇಓ ಡಾ.ನವೀನ್ ಭಟ್ ಆಗಮಿಸಿ, ಮಕ್ಕಳ ಕರೆಗಳನ್ನು ಸ್ವೀಕರಿಸಿ, ವಿದ್ಯಾರ್ಥಿ ಗಳ ಕಲಿಕೆಗೆ ಉತ್ತಮ ಸಲಹೆ ನೀಡಿದರು. ಮಕ್ಕಳು ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಉತ್ತರಿಸು ವಂತೆ ಶಿಕ್ಷಕರಿಗೆ ಸೂಚಿಸಿದರು.

ಈ ಕಾರ್ಯಕ್ರಮವು ನಿರಂತರವಾಗಿ ನಡೆಸಬೇಕು. ಪರೀಕ್ಷೆ ಹತ್ತಿರ ಬಂದಂತೆ ವಾರದಲ್ಲಿ ಎರಡು ಸಲ ಫೋನ್ ಇನ್ ಕಾರ್ಯಕ್ರಮ ನಡೆಸುವ ವ್ಯವಸ್ಥೆ ಮಾಡಬೇಕು. ಅತ್ಯಂತ ಕಡಿಮೆ ಸಾಧನೆ ಮಾಡುತ್ತಿರುವ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳಿಗೆ ವಿಷಯದ ಸಂಪನ್ಮೂಲದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಡಾ. ನವೀನ್ ಭಟ್ ಮಾತನಾಡಿ, ಇದೊಂದು ಅತ್ಯುತ್ತಮ ಕಾರ್ಯಕ್ರಮ ವಾಗಿದೆ. ನಿರಂತರವಾಗಿ ಏಳೂ ಜನ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸುವುದು ಉತ್ತಮ ಕಾರ್ಯ ಆಗಿದೆ. ಇಂದು ಎಲ್ಲ ಮಕ್ಕಳಿಗೆ ಶೈಕ್ಷಣಿಕ ಸಬಲತೆ ಬರಲು ಇದೊಂದು ಉತ್ತಮ ಕಾರ್ಯಕ್ರಮ ಎಂದರು.

ಏಳು ತಜ್ಞರ ತಂಡ: ವಿಜ್ಞಾನದ ಪ್ರಶ್ನೆಗಳಿಗೆ ಸಂಪನ್ಮೂಲ ತಂಡದಲ್ಲಿದ್ದ ಶಿಕ್ಷಕರುಗಳಾದ ದೀಪಾ ಹೆಜಮಾಡಿ, ರಜನಿ ಉಡುಪ, ವಿನೋದಾ, ನವ್ಯಾ, ನಾಗೇಂದ್ರ ಪೈ, ಮಿಲ್ಟನ್ ಕ್ರಾಸ್ಟಾ, ನಯನಾ ಉತ್ತರ ನೀಡಿದರು.

ಜಿಲ್ಲೆಯ ವಿವಿಧ ಪ್ರೌಢ ಶಾಲೆಗಳಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಕೆಲವು ಪಾಲಕರು ಸೇರಿ ಒಟ್ಟು 178 ಪ್ರಶ್ನೆಗಳು ಈ ಕಾರ್ಯಕ್ರಮದಲ್ಲಿ ಕೇಳಲಾಯಿತು. ಈ ಮೂಲಕ ವಿದ್ಯಾರ್ಥಿಗಳು ಕಲಿಕಾ ಸುಸ್ಯೆಗಳನ್ನು ಪರಿಹರಿಸಿಕೊಂಡರು.

ರಾಸಾಯನಿಕ ಸಮೀಕರಣವನ್ನು ಸರಿದೂಗಿಸುವುದು ಹೇಗೆ?, ವಕ್ರೀಭವನ ಸೂಚ್ಯಂಕ ಎಂದರೇನು?, ನ್ಯೂಲ್ಯಾಂಡನ ಅಷ್ಟಕದ ನಿಯಮದ ವಿವರಣೆ ಕೊಡಿ., ಹೈಡ್ರೋಜನ್ ಕಾರ್ಬೋನೇಟ್ ಎಥೆನಾಯಿಕ್‌ನೊಂದಿಗೆ ಹೇಗೆ ವರ್ತಿಸುತ್ತದೆ? ಸಹಿತ ಹಲವು ಪ್ರಶ್ನೆಗಳು ವಿಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದು, ಉಳಿದಂತೆ ಪರೀಕ್ಷೆಯ ಸಿಲೆಬಸ್‌ನ್ನು ಅಂತಿಮಗೊಳಿಸಲಾಗಿದೆಯೇ?, ಓದಿದ್ದೆಲ್ಲಾ ಕೂಡಲೇ ಮರೆತುಹೋಗುತ್ತದೆ ಏಕೆ? ನೆನಪುಳಿಯಲು ಏನು ಮಾಡಬೇಕು? ಪರೀಕ್ಷೆ ಯಾವಾಗ ಆರಂಭ ಆಗುತ್ತದೆ? ಎಂಬ ಪ್ರಶ್ನೆಗಳು ಕೂಡ ಕೇಳಿಬಂದವು.

ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ, ಉಡುಪಿ ಡಯಟ್ ಪ್ರಾಂಶುಪಾಲ ವೇದಮೂರ್ತಿ, ಶಿಕ್ಷಣಾಧಿಕಾರಿಗಳು ಜಾಹ್ನವಿ, ರವಿ, ನಾಗೇಂದ್ರಪ್ಪ, ಅಶೋಕ ಕಾಮತ ಮತ್ತು ಬಿಇಓ ಕೆ. ಮಂಜುಳಾ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News