ಉಡುಪಿ: ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

Update: 2021-01-15 16:06 GMT

ಉಡುಪಿ : ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ.42ರಷ್ಟು ಮತ ಗಳಿಕೆಯೊಂದಿಗೆ ಕಳೆದ ಪಂಚಾಯತ್ ಚುನಾವಣೆಗಿಂತ ಉತ್ತಮ ಫಲಿತಾಂಶ ದಾಖಲಿಸಿದೆ. ಈಗಾಗಲೇ ಗ್ರಾಮೀಣ ಸಮಿತಿಗಳ ರಚನೆಗೆ ಚಾಲನೆ ನೀಡಿ ಆ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಹೇಳಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕೊರೋನದಿಂದ ಜನತೆ ಆರ್ಥಿಕ ಸಂಕಷ್ಟದಲ್ಲಿರುವಾಗಲೇ ಸರಕಾರ ಇಂಧನ, ತೈಲ, ಅಡುಗೆ ಅನಿಲಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಬರೆ ಹಾಕಿದೆ. ಇದರೊಂದಿಗೆ ರಾಜ್ಯ ಸರಕಾರದ ವಿದ್ಯುತ್ ದರ ಏರಿಕೆ ಪ್ರಸ್ತಾಪ, ಆಸ್ತಿ ತೆರಿಗೆ ಹೆಚ್ಚಳದ ತೀರ್ಮಾನ ಖಂಡನೀಯ. ಖಾಲಿ ನಿವೇಶನಕ್ಕೂ ತೆರಿಗೆ ವಿಧಿಸುವ ಸರಕಾರದ ನಿರ್ಣಯ ಅಸಮರ್ಥನೀಯ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವುದೇ ಸರಕಾರ ಗಳ ಸಾಧನೆಯಾಗಿದೆ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳಿಗೆ ತರಬೇತಿ ಶಿಬಿರ ಏರ್ಪಡಿಸುವ ಬಗ್ಗೆ ಚಿಂತನೆ ನಡೆದಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಪಕ್ಷದ ತತ್ವ ಸಿದ್ದಾಂತದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದೊಂದಿಗೆ ಮುಂಬರುವ ಜಿಪಂ ಚುನಾವಣೆ ನಿಮಿತ್ತ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲು ಸಲಹೆ ನೀಡಿದರು.

ಗ್ರಾಮೀಣ ಸಮಿತಿ ರಚಿಸುವ ಬಗ್ಗೆ ಬ್ಲಾಕ್ ಅಧ್ಯಕ್ಷರಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಹಲವಾರು ಮಂದಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ಕುಶಲ್ ಶೆಟ್ಟಿ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ನೀರೆಕೃಷ್ಣ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಳೆ, ಶ್ಯಾಮಲ ಭಂಡಾರಿ, ಬಿ. ನರಸಿಂಹ ಮೂರ್ತಿ, ಭುಜಂಗ ಶೆಟ್ಟಿ, ಶಬ್ಬೀರ್ ಅಹ್ಮದ್, ಸುಧಾಕರ ಕೋಟ್ಯಾನ್, ಜ್ಯೋತಿ ಹೆಬ್ಬಾರ್, ಯತೀಶ್ ಕರ್ಕೇರಾ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೀರ್ತಿ ಶೆಟ್ಟಿ, ಹಬೀಬ್ ಆಲಿ, ಪ್ರಶಾಂತ್ ಜತ್ತನ್ನ,ಮಹಾಬಲ ಕುಂದರ್, ರಿಯಾಜ್ ಅಹ್ಮದ್, ರೋಶನಿ ಒಲಿವರ್, ಡಾ. ಸುನೀತಾ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು,ವಿಲ್ಸನ್ ರೋಡ್ರಿಗಸ್, ಉದ್ಯಾವರ ನಾಗೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ ಸ್ವಾಗತಿಸಿ, ಅಣ್ಣಯ್ಯ ಶೇರಿಗಾರ್ ವಂದಿಸಿದರು. ವಕ್ತಾರ ಭಾಸ್ಕರ್ ರಾವ್ ಕಿದಿಯೂರು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News