ಬಂಟ್ವಾಳ: ವಕೀಲ ರಾಜೇಶ್ ವಿರುದ್ಧ ದಾಖಲಾದ ಸುಳ್ಳು ಪ್ರಕರಣ ರದ್ದುಗೊಳಿಸಲು ಆಗ್ರಹ

Update: 2021-01-15 16:26 GMT

ಬಂಟ್ವಾಳ, ಜ.15: ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಅವರ ವಿರುದ್ಧ ದಾಖಲಾಗಿರುವ ಸುಳ್ಳು ಜಾತಿ ನಿಂದನೆ ಪ್ರಕರಣವನ್ನು ಕೂಡಲೇ ಪೊಲೀಸರು ಹಿಂಪಡೆಯುವಂತೆ ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಕುಮಾರ್ ವೈ ಒತ್ತಾಯಿಸಿದರು. 

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 9ರಂದು ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಅವರು ಕಚೇರಿ ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಮಣಿನಾಲ್ಕೂರು ಗ್ರಾಮದ ಪೂಪಾಡಿ ಕಟ್ಟೆ ಎಂಬಲ್ಲಿ ಕ್ಷುಲ್ಲಕ ವಿಚಾರಕ್ಕೆ ಕಾರನ್ನು ಅಡ್ಡಗಟ್ಟಿರುವ ಕೆಲವು ಕಿಡಿಗೇಡಿ ಯುವಕರ ತಂಡ ಕಾರಿನಿಂದ ಕೆಳಗಿಳಿಯುವಂತೆ ಅವಾಚ್ಯ ಶಬ್ದಗಳಿಂದ ನಿಂದಿಗೆ ಹಲ್ಲೆಗೆ ಯತ್ನಿಸಿ ಕೊಲೆಬೆದರಿಕೆ ಹಾಕಿದೆ. ಆದರೆ ರಾಜೇಶ್ ಅವರು ಕಾರಿನಿಂದ ಇಳಿಯದೆ ನೇರವಾಗಿ ಮನೆಗೆ ತೆರಳಿದ್ದಾರೆ ಎಂದರು.

ಯುವಕರ ತಂಡ ಕಾರನ್ನು ಅಡ್ಡಗಟ್ಟಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆಯ ಸಂಪೂರ್ಣ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿರುವ ನ್ಯಾಯವಾದಿ ರಾಜೇಶ್, ಅದನ್ನು ಆಧಾರವಾಗಿಟ್ಟುಕೊಂಡು ಜನವರಿ 10ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಿಡಿಗೇಡಿಗಳ ತಂಡ ಪರಿಶಿಷ್ಟ ಜಾತಿಗೆ ಸೇರಿದ ಓರ್ವ ಯುವಕ ಸಹಿತ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ನ್ಯಾಯವಾದಿ ರಾಜೇಶ್ ಮತ್ತು ಅವರ ತಂದೆ ನಾರಾಯಣ ಪೂಜಾರಿಯ ವಿರುದ್ಧ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸುಳ್ಳು ದೂರು ನೀಡಿದ್ದು ಅದನ್ನೂ ಪೊಲೀಸರು ಸ್ವೀಕರಿಸಿ ಎಫ್.ಐ.ಆರ್. ದಾಖಲಿಸಿದ್ದಾರೆ‌ ಎಂದು ಅವರು ತಿಳಿಸಿದರು.

ನ್ಯಾಯವಾದಿ ರಾಜೇಶ್ ನೀಡಿದ ದೂರನ್ನು ಜ. 10ರಂದು ಅಪರಾಹ್ನ 3:30ಕ್ಕೆ ಠಾಣಾಧಿಕಾರಿ ಸ್ವೀಕರಿಸಿದ್ದಾರೆ. ಕಿಡಿಗೇಡಿಗಳು ನೀಡಿರುವ ದೂರಿನಲ್ಲಿ ಜ.10ರಂದು ಮಧ್ಯಾಹ್ನ 2 ಗಂಟೆಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ ಎಂದು ದೂರಿದ್ದಾರೆ. ಆ ದಿನ ಮಧ್ಯಾಹ್ನ ನ್ಯಾಯವಾದಿ ರಾಜೇಶ್ ತನ್ನ ಕಚೇರಿಯಲ್ಲಿ ದೂರು ನೀಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು‌ ಎಂದು ತಿಳಿಸಿದರು.

ಒಬ್ಬ ವಕೀಲನ ವಿರುದ್ಧ ಬಂದ ಸುಳ್ಳು ದೂರನ್ನು ಠಾಣೆಯ ಪ್ಯಾನಲ್ ವಕೀಲರ ಸಲಹೆಯನ್ನು ಪಡೆಯದೆ, ವಕೀಲರ ಸಂಘದ ಅಧ್ಯಕ್ಷರ ಗಮನಕ್ಕೂ ತರದೆ, ಮೇಲಾಧಿಕಾರಿಗಳ ಸಲಹೆಯನ್ನೂ ಪಡೆಯದೆ, ಸತ್ಯಾಂಶವನ್ನು ವಿಮರ್ಶಿಸದೆ ಠಾಣಾಧಿಕಾರಿ ಎಫ್.ಐ.ಆರ್. ದಾಖಲಿಸಿರುವುದರ ಹಿಂದೆ ಕಾಣದ ಕೈಗಳ ಒತ್ತಡ ಇದೆ ಎಂದು ಅವರು ದೂರಿದರು.

ಕಿಡಿಗೇಡಿಗಳು ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂಬುದು ಗೊತ್ತಿದ್ದರೂ ಯಾರದ್ದೋ ಒತ್ತಡಕ್ಕೆ ಮಣಿದು ನ್ಯಾಯವಾದಿ ರಾಜೇಶ್ ಮತ್ತು ಅವರ ತಂದೆಯ ವಿರುದ್ಧ ಎಫ್.ಐ.ಆರ್. ದಾಖಲಿಸಿರುವ ಠಾಣೆಯ ಎಸ್ಸೈ ಅವರ ದುಂಡಾ ವರ್ತನೆಯನ್ನು ಬಂಟ್ವಾಳ ವಕೀಲರ ಸಂಘ ತುರ್ತು ಸಭೆ ನಡೆಸಿ ಖಂಡಿಸಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕವಾಗಿ ಕಾರ್ಯ ನಿರ್ವಹಿಸುವ ವಕೀಲರ ವಿರುದ್ಧ ಈ ರೀತಿಯ ಸುಳ್ಳು ದೂರುಗಳು ಬಂದ ಕೂಡಲೇ ಯಾವುದೇ ಪೂರ್ವ ಪರ ವಿಚಾರಣೆ ನಡೆಸದೆ ಯಾರದ್ದೋ ಒತ್ತಡಕ್ಕೆ ಮಣಿದು ಎಫ್.ಐ.ಆರ್.‌ ದಾಖಲಿಸುವುದರಿಂದ ಮುಂದಿನ ದಿನಗಳಲ್ಲಿ ವಕೀಲರ ವಿರುದ್ಧ ದುರುದ್ದೇಶಪೂರ್ವಕವಾಗಿ ಅಸಂಬದ್ಧ ದೂರುಗಳು ದಾಖಲಾಗುವ ಬೆಳವಣಿಗೆ ನಡೆಯಬಹುದು ಎಂದು ಕಳವಳ ವ್ಯಕ್ತಪಡಿಸಿದ ಉಮೇಶ್ ಕುಮಾರ್ ವೈ., ನ್ಯಾಯವಾದಿ ರಾಜೇಶ್ ಮತ್ತು ಅವರ ತಂದೆಯ ವಿರುದ್ಧ ದಾಖಲಾದ ಎಫ್.ಐ.ಆರ್. ಅನ್ನು ವಾರದೊಳಗೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ರಾವ್ ಪುಂಚಮೆ ಮಾತನಾಡಿ, ದಲಿತರಿಗೆ ಜಾತಿಯ ಹೆಸರಿನಲ್ಲಿ ನಡೆಯುವ ದೌರ್ಜನ್ಯವನ್ನು ತಡೆಯಲು ಜಾರಿಯಲ್ಲಿರುವ ಮಹತ್ವದ ದಲಿತ ದೌರ್ಜನ್ಯ ಕಾಯ್ದೆಯನ್ನು ಇಂದು ಕೆಲವರು ವೈಯಕ್ತಿಕ ಹಾಗೂ ಕ್ಷುಲ್ಲಕ ಕಾರಣಗಳಿಗೆ ದುರುಪಯೋಗ ಪಡಿಸುತ್ತಿದ್ದಾರೆ. ಇದು ಖಂಡನೀಯ. ಇದರಿಂದಾಗಿ ಆ ಕಾಯ್ದೆಯ ಮಹತ್ವವನ್ನು ಹಾಳಾಗುತ್ತಿದ್ದು ಆ ಕಾಯ್ದೆಯಡಿ ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ದೂರುದಾರ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಮಾತನಾಡಿ, ಮಣಿನಾಲ್ಕೂರು ಗ್ರಾಮದಲ್ಲಿರುವ ನಾರಾಯಣ ಗುರು ಮಂದಿರಕ್ಕೆ ಸೇರಿದ ಜಾಗದಲ್ಲಿ ಆಡಳಿತ ಮಂಡಳಿ ನಿರ್ಣಯ ಮಾಡುವವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂಬ ನಿಯಮ ಇದೆ. ಆದರೆ ಇಲ್ಲಿ ಕೆಲವರು ನಿಯಮ ಉಲ್ಲಂಘಿಸಿ ಕ್ರಿಕೆಟ್ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿರುವುದಕ್ಕೆ ಮತ್ತು ನಾನು ಒಬ್ಬ ವಕೀಲನಾಗಿ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಮಕ್ಕೆ ಒಳಿತು ಮಾಡುವ ಉತ್ತಮ ವ್ಯಕ್ತಿಗಳಿಗೆ ಮತ ಹಾಕಿ ಆರಿಸಿ ಎಂಬ ಸ್ಟೇಟಸ್ ಹಾಕಿರುವುದಕ್ಕೆ ಕೆಲವರು ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಸದಸ್ಯರಾದ ಮೋಹನ್ ಕುಮಾರ್ ಕಡೇಶಿವಾಲಯ, ಬಿ.ವಿ.ಶೆಣೈ, ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News