ವಿತ್ತ ಸಚಿವಾಲಯ, ನೀತಿ ಆಯೋಗ ಆಕ್ಷೇಪಿಸಿದ್ದರೂ ಆರು ವಿಮಾನ ನಿಲ್ದಾಣಗಳ ಬಿಡ್‌ಗಳನ್ನು ಗೆದ್ದಿದ್ದ ಅದಾನಿ ಗ್ರೂಪ್

Update: 2021-01-15 16:28 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.15: ವಿತ್ತ ಸಚಿವಾಲಯ ಮತ್ತು ನೀತಿ ಆಯೋಗ 2019ರ ಬಿಡ್ ಪ್ರಕ್ರಿಯೆಯ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರೂ ಅದಾನಿ ಗ್ರೂಪ್ ಆರು ವಿಮಾನ ನಿಲ್ದಾಣಗಳ ನಿರ್ವಹಣೆಗೆ ಬಿಡ್‌ಗಳನ್ನು ಗೆದ್ದುಕೊಂಡಿತ್ತು ಎಂದು ಆಂಗ್ಲ ಮಾಧ್ಯಮವೊಂದು ಶುಕ್ರವಾರ ವರದಿ ಮಾಡಿದೆ.

ವಿಮಾನ ನಿಲ್ದಾಣ ಉದ್ಯಮದಲ್ಲಿ ಅದಾನಿ ಗ್ರೂಪ್‌ನ ಪ್ರವೇಶಕ್ಕೆ ಅನುಕೂಲ ಕಲ್ಪಿಸಲು ನರೇಂದ್ರ ಮೋದಿ ನೇತೃತ್ವದ ಸರಕಾರವು ನಿಯಮಾವಳಿಗಳನ್ನು ಹೇಗೆ ಕಡೆಗಣಿಸಿತ್ತು ಎನ್ನುವುದರ ಕುರಿತು ಈ ಹಿಂದೆ ಸುದ್ದಿ ಜಾಲತಾಣ ‘ನ್ಯೂಸ್ ಕ್ಲಿಕ್’ ವರದಿ ಮಾಡಿತ್ತು.

ಸರಕಾರವು 2019ರಲ್ಲಿ ಅಹ್ಮದಾಬಾದ್, ಲಕ್ನೊ, ಜೈಪುರ,ಮಂಗಳೂರು, ಗುವಾಹಟಿ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳ ಖಾಸಗೀಕರಣ ಮಾಡಿತ್ತು. ಅದಾನಿ ಗ್ರೂಪ್ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಜಿಎಂಆರ್‌ನಂತಹ ಅನುಭವಿ ಸಂಸ್ಥೆಗಳನ್ನೂ ಹಿಂದಿಕ್ಕಿ 50 ವರ್ಷಗಳ ಅವಧಿಗೆ ಈ ವಿಮಾನ ನಿಲ್ದಾಣಗಳ ನಿರ್ವಹಣೆಯ ಹಕ್ಕನ್ನು ಗೆದ್ದುಕೊಂಡಿತ್ತು.

ಸರಕಾರಿ-ಖಾಸಗಿ ಸಹಭಾಗಿತ್ವ ಮೌಲ್ಯಮಾಪನ ಸಮಿತಿಯು 2018,ಡಿ.11ರಂದು ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ನಾಗರಿಕ ವಾಯುಯಾನ ಸಚಿವಾಲಯದ ಪ್ರಸ್ತಾವದ ಕುರಿತು ಚರ್ಚಿಸಿತ್ತು. ಯೋಜನೆಯು ಬೃಹತ್ ಹಣಕಾಸು ಅಪಾಯವನ್ನು ಒಳಗೊಂಡಿರುವುದರಿಂದ ಒಬ್ಬನೇ ಬಿಡ್ಡರ್‌ಗೆ ಎರಡಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ಒಪ್ಪಿಸಬಾರದು ಎಂದು ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ)ಯು ತನ್ನ ಡಿ.10ರ ಟಿಪ್ಪಣಿಯಲ್ಲಿ ಸಲಹೆ ನೀಡಿತ್ತು. ಆದರೆ ಮೌಲ್ಯಮಾಪನ ಸಮಿತಿಯ ಸಭೆಯಲ್ಲಿ ಈ ಟಿಪ್ಪಣಿಯ ಬಗ್ಗೆ ಚರ್ಚೆಯೇ ನಡೆದಿರಲಿಲ್ಲ ಎಂದು ಆಂಗ್ಲ ಮಾಧ್ಯಮಕ್ಕೆ ಲಭಿಸಿರುವ ದಾಖಲೆಗಳು ತೋರಿಸಿವೆ. ತನ್ನ ಆಕ್ಷೇಪಕ್ಕೆ ಸಮರ್ಥನೆಯಾಗಿ ದಿಲ್ಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳ ಉದಾಹರಣೆಗಳನ್ನು ನೀಡಿದ್ದ ಡಿಇಎ,ಜಿಎಂಆರ್ ಕಂಪನಿಯು ಏಕೈಕ ಅರ್ಹ ಬಿಡ್‌ದಾರನಾಗಿದ್ದರೂ ಎರಡೂ ವಿಮಾನ ನಿಲ್ದಾಣಗಳನ್ನು ಅದಕ್ಕೆ ಹಸ್ತಾಂತರಿಸಲಾಗಿರಲಿಲ್ಲ ಎನ್ನುವುದನ್ನು ಬೆಟ್ಟು ಮಾಡಿತ್ತು.

ಅದೇ ದಿನ ನೀತಿ ಆಯೋಗವು ಕೂಡ ಬಿಡ್ಡಿಂಗ್ ಪ್ರಕ್ರಿಯೆಯ ಬಗ್ಗೆ ತನ್ನ ಕಳವಳಗಳನ್ನು ವ್ಯಕ್ತಪಡಿಸಿತ್ತು. ಸಾಕಷ್ಟು ತಾಂತ್ರಿಕ ಸಾಮರ್ಥ್ಯವನ್ನು ಹೊಂದಿರದ ಬಿಡ್ಡರ್ ಸಂಸ್ಥೆಯು ಯೋಜನೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಮತ್ತು ಸರಕಾರವು ಒದಗಿಸಲು ಬದ್ಧವಾಗಿರುವ ಸೇವೆಗಳ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಬಹುದು ಎಂದು ಅದು ತಿಳಿಸಿತ್ತು.

ಈ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ್ದ ಮೌಲ್ಯಮಾಪನ ಸಮಿತಿಯು,ಪೂರ್ವ ಅನುಭವವು ಬಿಡ್ಡಿಂಗ್‌ಗೆ ಮೊದಲು ಮತ್ತು ಬಿಡ್ಡಿಂಗ್‌ನ ನಂತರದ ಅಗತ್ಯವೇನಲ್ಲ ಎಂದು ತಿಳಿಸಿತ್ತು.

ಬಿಡ್‌ಗಳನ್ನು ಗೆದ್ದ ಒಂದು ವರ್ಷದ ಬಳಿಕ ಅದಾನಿ ಗ್ರೂಪ್ ಅಹ್ಮದಾಬಾದ್,ಲಕ್ನೋ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಗಾಗಿ ರಿಯಾಯಿತಿ ಒಪ್ಪಂದಗಳಿಗೆ ಸಹಿ ಹಾಕಿತ್ತು ಮತ್ತು 2020,ನವೆಂಬರ್‌ನಲ್ಲಿ ಈ ಮೂರು ವಿಮಾನ ನಿಲ್ದಾಣಗಳನ್ನು ಅದಕ್ಕೆ ಹಸ್ತಾಂತರಿಸಲಾಗಿತ್ತು. ಗ್ರೂಪ್ ಕಳೆದ ಸೆಪ್ಟೆಂಬರ್‌ನಲ್ಲಿ ಗುವಾಹಟಿ,ಜೈಪುರ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳಿಗಾಗಿ ಒಪ್ಪಂದಗಳಿಗೆ ಸಹಿ ಹಾಕಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ.74ರಷ್ಟು ಪಾಲನ್ನು ತಾನು ಖರೀದಿಸಿರುವುದಾಗಿ ಅದಾನಿ ಗ್ರೂಪ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಪ್ರಕಟಿಸಿತ್ತು. ಈ ಸ್ವಾಧೀನವು ಶೀಘ್ರ ನಿರ್ಮಾಣಗೊಳ್ಳಲಿರುವ ನವಿ ಮುಂಬೈ ವಿಮಾನ ನಿಲ್ದಾಣದ ಒಡೆತನವನ್ನೂ ಅದಾನಿಗಳಿಗೆ ಒಪ್ಪಿಸಿದೆ. ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿ.ಇದರಲ್ಲಿ ಶೇ.74ರಷ್ಟು ಪಾಲು ಬಂಡವಾಳವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News