ಕೋವಿಡ್-19 ಲಸಿಕೆ ಅಭಿಯಾನಕ್ಕೆ ತನ್ನ ದತ್ತಾಂಶಗಳ ಬಳಕೆಗೆ ಚು.ಆಯೋಗ ಅಸ್ತು

Update: 2021-01-15 16:33 GMT

ಹೊಸದಿಲ್ಲಿ,ಜ.15: ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಮತಗಟ್ಟೆ ಮಟ್ಟದಲ್ಲಿ 50 ವರ್ಷಕ್ಕೆ ಮೇಲ್ಪಟ್ಟ ಫಲಾನುಭವಿಗಳನ್ನು ಗುರುತಿಸಲು ಸರಕಾರಕ್ಕೆ ಸಂಪೂರ್ಣ ಸಹಕಾರವನ್ನು ನೀಡಲು ಚುನಾವಣಾ ಆಯೋಗವು ಒಪ್ಪಿಕೊಂಡಿದೆ. ಆದರೆ ಲಸಿಕೆ ಅಭಿಯಾನವು ಪೂರ್ಣಗೊಂಡ ಬಳಿಕ ಆರೋಗ್ಯ ಅಧಿಕಾರಿಗಳು ತನ್ನಿಂದ ಪಡೆದುಕೊಂಡ ದತ್ತಾಂಶಗಳನ್ನು ಅಳಿಸಬೇಕು ಎಂದು ಅದು ಬಯಸಿದೆ ಎಂದು ಈ ಬೆಳವಣಿಗೆಯನ್ನು ಬಲ್ಲ ಮೂಲಗಳು ಶುಕ್ರವಾರ ತಿಳಿಸಿವೆ.

ಮತಗಟ್ಟೆ ಮಟ್ಟದಲ್ಲಿ 50 ವರ್ಷಕ್ಕೂ ಮೇಲ್ಪಟ್ಟವರನ್ನು ಗುರುತಿಸಲು ನೆರವಾಗುವಂತೆ ಕೋರಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಕಳೆದ ವರ್ಷದ ಡಿ.31ರಂದು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರವನ್ನು ಬರೆದಿದ್ದರು.

ದತ್ತಾಂಶಗಳ ಸುರಕ್ಷತೆಯ ಕುರಿತಂತೆ ,ಸೈಬರ್ ಭದ್ರತೆಯನ್ನು ಖಚಿತಪಡಿಸಲು ಹಾಲಿ ಅಸ್ತಿತ್ವದಲ್ಲಿರುವ ಅತ್ಯುತ್ತಮ ಪದ್ಧತಿಗಳನ್ನು ಸರಕಾರವು ಪಾಲಿಸಲಿದೆ ಎಂದು ಪತ್ರದಲ್ಲಿ ತಿಳಿಸಿದ್ದ ಭಲ್ಲಾ,ದತ್ತಾಂಶಗಳನ್ನು ಲಸಿಕೆ ನೀಡಿಕೆ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು ಎಂದು ಆಯೋಗಕ್ಕೆ ಭರವಸೆ ನೀಡಿದ್ದರು.

ಸರಕಾರದ ಮನವಿಯ ಬಗ್ಗೆ ವಿವರವಾಗಿ ಚರ್ಚಿಸಿದ ಬಳಿಕ ಆಯೋಗವು ಲಸಿಕೆ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡಲು ನಿರ್ಧರಿಸಿರುವುದಾಗಿ ಜ.4ರಂದು ಗೃಹ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ ಎಂದು ಈ ಮೂಲಗಳು ಹೇಳಿವೆ.

 ಲಸಿಕೆ ಅಭಿಯಾನವು ಪೂರ್ಣಗೊಂಡ ಬಳಿಕ ಆರೋಗ್ಯ ಅಧಿಕಾರಿಗಳು ತನ್ನಿಂದ ಪಡೆದುಕೊಂಡಿರುವ ದತ್ತಾಂಶಗಳನ್ನು ಅಳಿಸಬೇಕು ಮತ್ತು ದೈನಂದಿನ ಸಮಸ್ಯೆಗಳನ್ನು ಬಗೆಹರಿಸಲು ತನ್ನ ಕೆಲವು ಹಿರಿಯ ಅಧಿಕಾರಿಗಳು ಗೃಹ ಸಚಿವಾಲಯದಲ್ಲಿಯ ನೋಡಲ್ ಅಧಿಕಾರಿಗಳ ಸಂಪರ್ಕದಲ್ಲಿರುತ್ತಾರೆ ಎಂದೂ ಆಯೋಗವು ಹೇಳಿದೆ.

ಶನಿವಾರದಿಂದ ಆರಂಭಗೊಳ್ಳುವ ಲಸಿಕೆ ಅಭಿಯಾನಕ್ಕಾಗಿ ಇತ್ತೀಚಿನ ಮಾರ್ಗಸೂಚಿಯಂತೆ 50 ವರ್ಷಕ್ಕೂ ಮೇಲಿನವರನ್ನು ಗುರುತಿಸಲು ಸರಕಾರವು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಇತ್ತೀಚಿನ ಮತದಾರರ ಪಟ್ಟಿಗಳನ್ನು ಬಳಸಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News