ಯುವಕರ ಬಂಧನ ಮುಸ್ಲಿಮರ ವಿರುದ್ಧದ ವ್ಯವಸ್ಥಿತ ದುಷ್ಕೃತ್ಯ : ಶಾಫಿ ಬೆಳ್ಳಾರೆ

Update: 2021-01-15 16:44 GMT

ಮಂಗಳೂರು, ಜ.15: ‘ಉಜಿರೆಯಲ್ಲಿ ಮತ ಎಣಿಕೆ ಸಂದರ್ಭ ಪಾಕ್ ಪರ ಘೋಷಣೆ ಕೂಗಿರುವ ಆರೋಪದಲ್ಲಿ ಪಕ್ಷದ ಮೂವರು ಕಾರ್ಯಕರ್ತರನ್ನು ಬಂಧಿಸಿದ ಪ್ರಕರಣವು ಮುಸ್ಲಿಮರ ವಿರುದ್ಧ ನಡೆಸಿದ ವ್ಯವಸ್ಥಿತ ದುಷ್ಕೃತ್ಯವಾಗಿದೆ’ ಎಂದು ಪಿಎಫ್‌ಐನ ರಾಜ್ಯ ಸಮಿತಿಯ ಸದಸ್ಯ ಶಾಫಿ ಬೆಳ್ಳಾರೆ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕ್ಲಾಕ್ ಟವರ್ ಸಮೀಪ ನಡೆದ ‘ಎಸ್ಪಿ ಕಚೇರಿಗೆ ಚಲೋ’ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕರಣದಲ್ಲಿ ಬಂಧಿತರಾದ ಅಮಾಯಕರನ್ನು ಬಿಡುಗಡೆಗೊಳಿಸಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಪೊಲೀಸರಿಂದ ಯಾವುದೇ ಕ್ರಮವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸರಕಾರದ ಹಿಡಿತದಿಂದ ಪೊಲೀಸ್ ಇಲಾಖೆಯನ್ನು ಮುಕ್ತಗೊಳಿಸಲಿದ್ದೇವೆ. ತಾರತಮ್ಯ ರಹಿತ ನ್ಯಾಯ ಕೊಡಿಸಬೇಕು. ಘಟನೆಯ ಮೂಲ ಪಾಕಿಸ್ತಾನ. ಬಿಜೆಪಿಯು ‘ಪಾಕಿಸ್ತಾನ’ದ ಹೆಸರಿನಿಂದಲೇ ಗೆಲುವು ಸಾಧಿಸುತ್ತಾ ಬಂದಿದೆ. ಅಭಿವೃದ್ಧಿ ಪರ ಚಿಂತನೆ ಇಲ್ಲದೆ ಬಿಜೆಪಿ ಅಧಿಕಾರ ನಡೆಸುತ್ತಿದೆ. ದೇಶದಲ್ಲಿ ಬಡತನ, ಹಸಿವಿನ ಆಕ್ರಂದನ ಇದ್ದರೂ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಅನ್ನದಾತ ರೈತರು ದೆಹಲಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಶಕ್ತಿಯನ್ನು ಉದ್ಯಮಿಗಳಿಗೆ ಕೊಡಲು ಕೇಂದ್ರ ರೂಪಿಸುತ್ತಿದೆ ಎಂದು ಹೇಳಿದರು.

ಬಿಜೆಪಿಯ ರಾಷ್ಟ್ರೀಯ ಮುಖಂಡರಿಂದ ಸ್ಥಳೀಯ ಸಂಘಪರಿವಾರದ ಗೂಂಡಾಗಳು ಕೂಡ ಪಾಕ್ ನಾಮಧೇಯ ಜಪಿಸುತ್ತಿದ್ದಾರೆ. ಇವರು ಪಾಕ್‌ನಲ್ಲಿ ಬಿರಿಯಾನಿ ತಿನ್ನುತ್ತಾರೆ; ಹಫೀಝ್ ಸೈಯದ್ ಮನೆಗೆ ಹೋಗಿ ಬರುತ್ತಾರೆ; ದೇಶ ರಹಸ್ಯ ಮಾಹಿತಿಯನ್ನು ಪಾಕ್‌ಗೆ ರವಾನಿಸುತ್ತಾರೆ. ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸುತ್ತಾರೆ. ಸಂಘಪರಿವಾರವೇ ಪಾಕ್ ಪ್ರೇಮಿಗಳಾಗಿದ್ದಾರೆ ಎಂದು ಹೇಳಿದರು.

ಪಿಎಫ್‌ಐ ಸಹಿತ ಹಲವು ಪಕ್ಷಗಳ ಕಚೇರಿ ಮೇಲೆ ಕೇಂದ್ರ ಸರಕಾರವು ದಾಳಿ ನಡೆಸುತ್ತಿದೆ. ಇಂತಹ ಸಂದರ್ಭ ಅವರಿಗೆ ಏನೂ ಸಿಕ್ಕಿಲ್ಲ. ಆರೆಸ್ಸೆಸ್ ಸಹಿತ ಸಂಘಪರಿವಾರದ ಶಾಖೆಗಳ ಮೇಲೆ ದಾಳಿ ನಡೆಸಿದರೆ ಪಾಕ್ ಧ್ವಜ ಸಿಗುವುದು ನಿಶ್ಚಯ ಎಂದು ಅಭಿಪ್ರಾಯಪಟ್ಟರು.

ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕ್, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ರಾಜ್ಯ ಸದಸ್ಯ ಆನಂದ್ ಮಿತ್ತಬೈಲ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐನ ರಾಜ್ಯ ಸಮಿತಿ ಸದಸ್ಯ ಅಕ್ರಮ ಹಸನ್, ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಎಸ್‌ಡಿಪಿಯು ರಾಜ್ಯ ಕಾರ್ಯದರ್ಶಿ ಜಲೀಲ್ ಕೃಷ್ಣಾಪುರ, ಜಿಲ್ಲಾ ಸಮಿತಿ ಸದಸ್ಯ ಲ್ಯಾನ್ಸಿ ಪಿರೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಎಸ್.ಎಚ್., ಉಪಾಧ್ಯಕ್ಷ ಇಕ್ಬಾಲ್ ಐ.ಎಂ.ಆರ್., ವುಮೆನ್ಸ್ ಇಂಡಿಯಾ ಮೂವ್‌ಮೆಂಟ್‌ನ ಜಿಲ್ಲಾಧ್ಯಕ್ಷೆ ನಶ್ರಿಯಾ ಬೆಳ್ಳಾರೆ, ಮನಪಾ ಸದಸ್ಯರಾದ ಮುನೀಬ್ ಬೆಂಗ್ರೆ, ಶಂಶಾದ್ ಅಬೂಬಕರ್, ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾಧ್ಯಕ್ಷ ಸುಹೈಲ್ ಖಾನ್ ಮತ್ತಿತರರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಕಾರ್ಯಕ್ರಮ ನಿರೂಪಿಸಿದರು.

‘ಮುಸ್ಲಿಮರಿಗೆ ಮಾತ್ರವೇ ಎಫ್‌ಎಸ್‌ಎಲ್ ತನಿಖೆಯೇ ?’

ಉಜಿರೆ ಪ್ರಕರಣದಲ್ಲಿ ಮುಸ್ಲಿಮರ ಧ್ವನಿಯನ್ನು ಎಫ್‌ಎಸ್‌ಎಲ್ ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಈ ಹಿಂದಿನ ಪ್ರತಿಭಟನೆಯಲ್ಲಿ ಅಮಾಯಕ ಮುಸ್ಲಿಮರು ಬಂಧನಕ್ಕೊಳಪಟ್ಟಾಗ ಎಫ್‌ಎಸ್‌ಎಲ್ ತನಿಖೆಯನ್ನು ಏಕೆ ನಡೆಸಲಿಲ್ಲ ಎಂದು ಪಿಎಫ್‌ಐನ ರಾಜ್ಯ ಸಮಿತಿಯ ಸದಸ್ಯ ಶಾಫಿ ಬೆಳ್ಳಾರೆ ಪ್ರಶ್ನಿಸಿದರು.

ಅಮಾಯಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲು ಒತ್ತಡ ಹಾಕಿದವರಾರು ?, ಬೆಳ್ತಂಗಡಿಯಲ್ಲಿ ಜಾತಿಗಳ ನಡುವೆ ಕಂದಕ ಸೃಷ್ಟಿಸಲಾಗುತ್ತಿದೆ. ಇದನ್ನು ತಡೆ ಹಿಡಿಯಲು ಪೊಲೀಸರಿಗೆ ಆಸಕ್ತಿ ಇಲ್ಲವೇ ಎಂದೂ ಅವರು ಪ್ರಶ್ನಿಸಿದರು. ಪೊಲೀಸರನ್ನು ಅಮಾನತು ಮಾಡದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು. ನಮಗೆ ನ್ಯಾಯ ದೊರಕಲಿದೆ. ಪೊಲೀಸರ ಮೇಲೆ ವಿಶ್ವಾಸವಿದೆ ಎಂದರು.

ಶಾಂತಿಯುತ ಪ್ರತಿಭಟನೆಗೆ ಕಮಿಷನರ್ ಶ್ಲಾಘನೆ

ಮಂಗಳೂರು ನಗರದ ಹೃದಯಭಾಗದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಶಾಂತಿಯುತ ಬೃಹತ್ ಪ್ರತಿಭಟನೆ ನಡೆಸಿರುವುದನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶ್ಲಾಘನೆ ವ್ಯಕ್ತಪಡಿಸಿದರು.

ಶಾಂತಯುತವಾಗಿ ಪ್ರತಿಭಟನೆ ಮಾಡಿದ್ದಕ್ಕೆ ಶುಭಾಶಯ. ಎಸ್‌ಡಿಪಿಐ ಕಾರ್ಯಕರ್ತರ ಮನವಿಯನ್ನು ಐಜಿಪಿಗೆ ತಲುಪಿಸುತ್ತೇವೆ ಎಂದು ಹೇಳಿದರು. ಕೆಲಹೊತ್ತು ಪ್ರತಿಭಟನೆ ವೀಕ್ಷಿಸಿ ಬಳಿಕ ಆಯುಕ್ತರ ಕಚೇರಿಗೆ ವಾಪಸಾದರು.

ಪರವಾನಿಗೆ ರಹಿತ ಡ್ರೋನ್ ಬಳಕೆ ಆರೋಪ: ಇಬ್ಬರು ವಶಕ್ಕೆ

ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಎಸ್‌ಡಿಪಿಐನಿಂದ ನಡೆಸುತ್ತಿದ್ದ ಬೃಹತ್ ಪ್ರತಿಭಟನೆಯ ಸಂದರ್ಭ ಪರವಾನಿಗೆ ರಹಿತ ಡ್ರೋನ್ ಬಳಕೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ಕಪ್ಪು ಬಣ್ಣದ ಬೃಹತ್ ಗಾತ್ರದ ಡ್ರೋನ್ ಬಹಳ ಹೊತ್ತಿನಿಂದ ಹಾರಾಟ ನಡೆಸಿತ್ತು. ಸಂಜೆ 4 ಗಂಟೆ ಸುಮಾರಿಗೆ ಡ್ರೋನ್ ಹಾರಿಸುತ್ತಿದ್ದ ಇಬ್ಬರು ಯುವಕರನ್ನು ಕೆಲಹೊತ್ತು ವಿಚಾರಣೆ ನಡೆಸಿ ಬಳಿಕ ಪೊಲೀಸ್ ವಾಹನದಲ್ಲಿ ಕರೆದೊಯ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News