ಮಂಗಳೂರು: ಬಸ್‌ ನಲ್ಲಿ ಕಿರುಕುಳ ನೀಡಿದ ವ್ಯಕ್ತಿ; ವೈರಲ್‌ ಆದ ಯುವತಿಯ ಇನ್‌ ಸ್ಟಾಗ್ರಾಂ ಪೋಸ್ಟ್

Update: 2021-01-15 17:04 GMT

ಮಂಗಳೂರು,ಜ.15: ಮಂಗಳೂರಿನ ಸಿಟಿ ಬಸ್ಸೊಂದರಲ್ಲಿ ವ್ಯಕ್ತಿಯೋರ್ವ 24ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದು, ಈ ಕುರಿತಾದಂತೆ ಯುವತಿಯು ಸಾಮಾಜಿಕ ತಾಣ ಇನ್‌ ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ ಮಾಡಿದ ಕೆಲವೇ ಸಮಯಗಳಲ್ಲಿ ಫೋಟೊ ವೈರಲ್‌ ಆಗಿದ್ದು, ಪ್ರಕರಣದ ಕುರಿತಾದಂತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಗಿ ಯುವತಿಯು ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.

ಜ.14ರಂದು ಯುವತಿಯು ಕೊಣಾಜೆಯಿಂದ ಮಂಗಳೂರಿನ ಪಂಪ್‌ ವೆಲ್‌ ಗೆ ಖಾಸಗಿ ಸಿಟಿ ಬಸ್‌ ಮುಖಾಂತರ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೋರ್ವ ಬಸ್‌ ಹತ್ತಿದ್ದು, ಸೀಟುಗಳು ಖಾಲಿಯಿದ್ದರೂಆತ ಯುವತಿಯ ಬಳಿ ಬಂದು ಕುಳಿತಿದ್ದ. ಯುವತಿಯ ಹೇಳಿಕೆ ಪ್ರಕಾರ “ಕೆ.ಎಸ್.‌ ಹೆಗ್ಡೆ ಆಸ್ಪತ್ರೆಯ ಸಮೀಪ ಬಸ್‌ ನಿಲ್ಲಿಸಿದಾಗ ಆತ ನನ್ನೊಂದಿಗೆ  ಅನುಚಿತವಾಗಿ ವರ್ತಿಸಲು ಹಾಗೂ ದೇಹವನ್ನು ಮುಟ್ಟಲು ಪ್ರಾರಂಭಿಸಿದ್ದ. ಈ ವೇಳೆ ನಾನು ಆತನನ್ನು ಗದರಿದ ಕಾರಣ ಬೆದರಿದ ಆತ ಬೇರೆ ಸೀಟಿನಲ್ಲಿ ಕುಳಿತು ಮುಂದಿನ ನಿಲ್ದಾಣದಲ್ಲಿ ಇಳಿದಿದ್ದ”.

“ಮೂರು ನಿಲ್ದಾಣ ಕಳೆದ ಬಳಿಕ ಆತ ಮತ್ತೊಂದು ಬಸ್‌ ನಿಂದ ಇಳಿದು ಮತ್ತೊಮ್ಮೆ ಇದೇ ಬಸ್‌ ಹತ್ತಿ ನನ್ನ ಪಕ್ಕ ಕುಳಿತುಕೊಂಡ. ಮೊದಲಿನಂತೆಯೇ ದೇಹವನ್ನು ಸ್ಪರ್ಶಿಸಲು ಆರಂಭಿಸಿದ. ಈ ವೇಳೆ ಕೋಪಗೊಂಡ ನಾನು, ಬೇರೆ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದೆ. ಆದರೆ ಆತ ಮತ್ತೆ ತನ್ನ ಕ್ರಿಯೆಯನ್ನು ಪುನರಾರಂಭಿಸಿದ. ನಾನು ಜೋರಾಗಿ ಗದರುತ್ತಿದ್ದರೂ ಕೂಡಾ ಬಸ್‌ ನಲ್ಲಿರುವ ಚಾಲಕನಾಗಲಿ, ನಿರ್ವಾಹಕನಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ”

“ನಾನು ನಿನ್ನ ಫೋಟೊವನ್ನು ತೆಗೆದು ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡುತ್ತೇನೆ ಅಂದಾಗ ಆತ ಅನಿರೀಕ್ಷಿತವಾಗಿ ತನ್ನ ಮಾಸ್ಕ್‌ ತೆಗೆದು ಪೋಸ್‌ ಕೊಡಲು ಆರಂಭಿಸಿದ. ಫೋಟೊ ಕ್ಲಿಕ್ಕಿಸಿದ ಬಳಿಕ ತ್ಯಾಂಕ್ಯೂ ಹೇಳಿದ. ಈ ಪೋಸ್ಟ್‌ ಅನ್ನು ನಿಮ್ಮಲ್ಲರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಕಟಿಸುತ್ತಿದ್ದೇನೆ. 99% ಮಹಿಳೆಯರು ದಿನಾ ಸಿಟಿ ಬಸ್‌ ಗಳಲ್ಲಿ ಇಂತಹಾ ಕಿರುಕುಳ ಅನುಭವಿಸುತ್ತಾರೆ. ಅವರು ಯಾರೂ ತಮ್ಮ ಭವಿಷ್ಯ ಮತ್ತು ಮಾನಕ್ಕೆ ಹೆದರಿ ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲ ಮತ್ತು ಪ್ರತಿಕ್ರಿಯಿಸುವುದಿಲ್ಲ. ಇನ್ನು ಅಲ್ಲಿರುವ ಸಹ ಪ್ರಯಾಣಿಕರಾಗಲಿ, ಪೊಲೀಸರಾಗಲಿ, ಬಸ್‌ ಸಿಬ್ಬಂದಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡದೇ ರಿಯಾಲಿಟಿ ಶೋ ನೋಡುವಂತೆ ವೀಕ್ಷಿಸುತ್ತಿರುತ್ತಾರೆ” ಎಂದು ತಮ್ಮ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಕುರಿತು ʼವಾರ್ತಾಭಾರತಿʼ ಯುವತಿಯೊಂದಿಗೆ ಕಾನೂನು ಕ್ರಮದ ಕುರಿತು ವಿಚಾರಿಸಿದಾಗ, “ಈ ಕುರಿತು ನಾನು ಈಗಾಗಲೇ ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ. ಈ ವ್ಯಕ್ತಿಯನ್ನು ಬಂಧಿಸುವ ಅವಶ್ಯಕತೆಯಿಲ್ಲ. ಇಂತಹಾ ಒಬ್ಬನನ್ನು ಬಂಧಿಸಿದರೆ ಯಾವುದೇ ಪ್ರಯೋಜನವಿಲ್ಲ. ದಿನನಿತ್ಯ ಇದೇ ರೀತಿ ಬಸ್‌ ಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ಹಲವಾರು ಮಹಿಳೆಯರು, ಮಕ್ಕಳು ಮತ್ತು ಪುರುಷರು ಕೂಡಾ ತೊಂದರೆಗೊಳಗಾಗುತ್ತಾರೆ. ನನಗೆ ಈ ಕುರಿತಾದಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿತ್ತು. ಇಂತಹಾ ಘಟನೆಗಳು ನಡೆದಾಗ ಹಲವರು ಪ್ರತಿಕ್ರಿಯಿಸುವುದಿಲ್ಲ. ಆದರೆ ಇನ್ನು ಮುಂದೆ ಎಲ್ಲರೂ ಪ್ರತಿಕ್ರಿಯಿಸುವ ಅಗತ್ಯವಿದೆ. ಒಬ್ಬನನ್ನು ಬಂಧಿಸಿ ಏನೂ ಸಾಧಿಸಲಾಗುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

ಈ ಪ್ರಕರಣದ ಕುರಿತಾದಂತೆ ಯುವತಿಯು ಇನ್‌ ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರೀ ಪ್ರತಿಕ್ರಿಯೆಯು ಕಂಡು ಬಂದಿದ್ದು, ಈಗಾಗಲೇ 75,000ಕ್ಕೂ ಹೆಚ್ಚು ಮಂದಿ ಪೋಸ್ಟ್‌ ಲೈಕ್‌ ಮಾಡಿದ್ದಾರೆ. ಹಲವಾರು ಮಂದಿ ತಮ್ಮ ಸ್ಟೇಟಸ್‌ ಗಳಲ್ಲಿ ಮತ್ತು ಖಾತೆಗಳಲ್ಲಿ ಶೇರ್‌ ಮಾಡಿ, ಈ ಕುರಿತಾದಂತೆ ಜಾಗೃತಿ ಮೂಡಿಸುವಲ್ಲಿ ಕೈಜೋಡಿಸಿದ್ದಾರೆ.

ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿದ ಮಹಿಳಾ ಪೊಲೀಸ್‌ ಠಾಣೆಯ ಎಸ್ಸೈ ರೋಸಮ್ಮ, "ಯುವತಿಯು ದೂರನ್ನು ಬರಹದ ಮೂಲಕ ನೀಡದಿರುವ ಕಾರಣ ಅಪರಿಚಿತ ವ್ಯಕ್ತಿಯ ವಿರುದ್ಧ ನಾವು ಯಾವುದೇ ಎಫ್‌ʼಐಆರ್‌ ದಾಖಲಿಸಿಲ್ಲ. ಈ ಕುರಿತಾದಂತೆ ನಾವು ಅಭಿಯಾನ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಯಾವುದೇ ಮಹಿಳೆಯರು ಇಂತಹಾ ಪ್ರಕರಣಗಳು ನಡೆದಾಗ ಸುಮ್ಮನಿರದೇ ನಿಮ್ಮಿಂದಾಗುವ ಪ್ರತಿಕ್ರಿಯೆಯನ್ನು ನೀಡಬೇಕು” ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News