ಬಾಲಕರ ಅಪಹರಣ ಯತ್ನ ಪ್ರಕರಣ: ವಿದ್ಯಾರ್ಥಿ ಸಹಿತ ಮೂವರು ವಶಕ್ಕೆ

Update: 2021-01-15 17:10 GMT

ಮಂಗಳೂರು, ಜ.15: ನಗರದ ಕೊಂಚಾಡಿ ದೇವಸ್ಥಾನ ಸಮೀಪ ಬಾಲಕರನ್ನು ದುಷ್ಕರ್ಮಿಗಳು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂವರು ಕೂಡ ಕಾವೂರು ಮತ್ತು ಬೊಂದೇಲ್ ನಿವಾಸಿಗಳಾಗಿದ್ದು, ಇವರಲ್ಲಿ ಓರ್ವ ಕಾಲೇಜು ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಪ್ರಕರಣ ವಿವರ: ಬುಧವಾರ ಸಂಜೆ 7 ಗಂಟೆಯ ಸುಮಾರಿಗೆ ನಾಲ್ವರು ಬಾಲಕರು ಕೊಂಚಾಡಿ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಯತ್ತ ತೆರಳುತ್ತಿದ್ದರು. ಮೂವರು ಬಾಲಕರು ದೇವಳ ಪ್ರಾಂಗಣ ದಾಟಿ ಎದುರು ರಸ್ತೆಯಲ್ಲಿ ತೆರಳುತ್ತಿದ್ದಾಗ ಸ್ಕೂಟಿಯಲ್ಲಿ ಬಂದ ಯುವಕರು ರಸ್ತೆ ಬದಿ ನಿಂತಿದ್ದರು. ಈ ಸಂದರ್ಭ ಆರೋಪಿಯೊಬ್ಬ ಎದುರಿನಲ್ಲಿ ಹೋಗುತ್ತಿದ್ದ ಬಾಲಕನಿಗೆ ಗೋಣಿ ಚೀಲ ಮುಸುಕು ಹಾಕಲು ಯತ್ನಿಸಿದ್ದಾನೆ. ಬಾಲಕ ಆತನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದು, ಕೂಡಲೇ ಇನ್ನೊಬ್ಬ ಬಾಲಕನಿಗೆ ಮುಸುಕು ಹಾಕಲು ಮುಂದಾಗಿದ್ದು, ಈ ವೇಳೆ ಹಿಂದಿನಿಂದ ಸಾಗುತ್ತಿದ್ದ ಮತ್ತೋರ್ವ ಬಾಲಕ ರಸ್ತೆ ಬದಿಯಲ್ಲಿದ್ದ ಕಲ್ಲು ಹೆಕ್ಕಿ ಬಿಸಾಡಿದ್ದಾನೆ. ಅಷ್ಟರಲ್ಲಿ ಅಪಾಯ ಅರಿತ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಸ್ಕೂಟಿಯಲ್ಲಿ ಬಂದು ಮಕ್ಕಳನ್ನು ಯಾಮಾರಿಸುವ ನಾಟಕವಾಡಿ ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲು ಚಿಂತನೆ ಮಾಡಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News