2020ರ ಜಾಗತಿಕ ಉಷ್ಣತೆ ಇತಿಹಾಸದ 2ನೇ ಗರಿಷ್ಠ: ವಿಶ್ವ ಹವಾಮಾನ ಸಂಘಟನೆ ವರದಿ

Update: 2021-01-15 18:08 GMT

 ವಾಶಿಂಗ್ಟನ್, ಜ. 15: 2020ರ ಜಾಗತಿಕ ಉಷ್ಣತೆಯು ಈವರೆಗೆ ದಾಖಲಾಗಿರುವ ಉಷ್ಣತೆಯಲ್ಲೇ ಎರಡನೇ ಗರಿಷ್ಠವಾಗಿದೆ ಹಾಗೂ 2016ರ ಉಷ್ಣತಾ ಮಟ್ಟಕ್ಕಿಂತ ಮಾತ್ರ ಹಿಂದಿದೆ ಎಂದು ವಿಶ್ವ ಹವಾಮಾನ ಸಂಘಟನೆ ಗುರುವಾರ ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಹೇಳಿದೆ.

ಈ ಅವಧಿಯಲ್ಲಿ ಕೋವಿಡ್-19 ಸಂಬಂಧಿ ಲೌಕ್‌ಡೌನ್ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಹಾಗೂ ಆ ಮೂಲಕ ಉತ್ಪತ್ತಿಯಾಗುವ ಮಾಲಿನ್ಯಕಾರಿ ಹೊಗೆಯ ಪ್ರಮಾಣ ಕನಿಷ್ಠ ಮಟ್ಟಕ್ಕಿಳಿದಿದ್ದರೂ ಜಾಗತಿಕ ತಾಪಮಾನದಲ್ಲಿ ಮಾತ್ರ ಏರಿಕೆ ಕಂಡುಬಂದಿದೆ.

ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ಹವಾಮಾನ ಇಲಾಖೆ ಮತ್ತು ಬ್ರಿಟನ್ ಹವಾಮಾನ ಇಲಾಖೆಗಳ ಅಂಕಿಅಂಶಗಳನ್ನು ವಿಶ್ವ ಹವಾಮಾನ ಸಂಘಟನೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

‘‘ಹವಾಮಾನ ಬದಲಾವಣೆಯು ಅಪರಿಮಿತ ವೇಗದಲ್ಲಿ ಧಾವಿಸುತ್ತಿದೆ ಹಾಗೂ ಅದು ಭೂಮಿಯಾದ್ಯಂತ ಜೀವಿಗಳು ಮತ್ತು ಜೀವನೋಪಾಯಗಳನ್ನು ನಾಶಪಡಿಸುತ್ತಿದೆ ಎನ್ನುವುದನ್ನು ಈ ವರದಿಯು ನಮಗೆ ಮತ್ತೊಮ್ಮೆ ಜ್ಞಾಪಿಸುತ್ತಿದೆ’’ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

‘‘ಪ್ರಕೃತಿಯೊಂದಿಗೆ ರಾಜಿ ಮಾಡಿಕೊಂಡು ಬದುಕುವುದು 21ನೇ ಶತಮಾನದ ನಮ್ಮ ಆದ್ಯ ಗುರಿಯಾಗಬೇಕು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News