'ಟೀಮ್ ಬಿ-ಹ್ಯೂಮನ್' ವತಿಯಿಂದ 600 ಅರ್ಹ ಕುಟುಂಬಗಳಿಗೆ ಹೊಸ ಸಿದ್ಧ ಉಡುಪು ವಿತರಣೆ

Update: 2021-01-15 18:18 GMT

ಮಂಗಳೂರು : 'ಟೀಂ ಬಿ-ಹ್ಯೂಮನ್ ಮಂಗಳೂರು' ಸಮಾಜಸೇವಾ ಸಂಸ್ಥೆ ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ 600 ಬಡ, ಅರ್ಹ ಕುಟುಂಬಗಳಿಗೆ (ಸುಮಾರು 2000 ಮಂದಿ) ಸಿದ್ಧ ಉಡುಪು ಮತ್ತು ಬಟ್ಟೆಬರೆಗಳ ವಿತರಣೆ ಕಾರ್ಯ ನಡೆಸಿತು.

ಹಲವು ದಿನಗಳಿಂದ ನಡೆದ ವಿತರಣೆ ಕಾರ್ಯವು ಪುತ್ತೂರು ತಾಲೂಕಿನ ಕೆಮ್ಮಾರ, ಗಂಡಿಬಾಗಿಲು, ಮೊಟ್ಟೆತ್ತಡ್ಕ , ಕಲ್ಲೇಗ, ಸವಣೂರು ಮತ್ತು ಬೆಳ್ತಂಗಡಿ ತಾಲೂಕಿನ ಬಾಜಾರ್, ಬೈಲಮೇಲು, ಕನರಾಜೆ ತೆಕ್ಕಾರ್, ಬಾಜಾರ್ ಕ್ವಾಟ್ರಸ್, ಕುಕ್ಕಿನಡಿ, ಸರಳೀಕಟ್ಟೆ, ಚಿಂಗಾಣಿಬೆಟ್ಟು ಸೇರಿ ಒಟ್ಟು 12 ಸ್ಥಳಗಳಲ್ಲಿ ಬಟ್ಟೆಬರೆ ವಿತರಣೆ ನಡೆಸಿದೆ.

ಎಲ್ಲಾ ಜಾತಿ, ಧರ್ಮದ ಅರ್ಹ ಕುಟುಂಬದ ಜನರಿಗೆ ಬಟ್ಟೆಬರೆ ನೀಡಲಾಯಿತು. ಈ ವಸ್ತ್ರ ವಿತರಣೆಯಲ್ಲಿ ಮಹಿಳೆಯರಿಗೆ ಸಾರಿ, ಫ್ಯಾನ್ಸಿ ಚೂಡಿದಾರ್, ಕುರ್ತಿ ಟಾಪ್ಸ್, ಚೂಡಿದಾರ್ ಪೀಸ್, ಹೆಣ್ಣುಮಕ್ಕಳ ಸಿದ್ಧ ಉಡುಪುಗಳಾದ ಫ್ರಾಕ್, ಮಿಡಿ, ಸಲ್ವರ್ಸ್, ಗಂಡು ಮಕ್ಕಳ ರೆಡಿಮೇಡ್ ಶರ್ಟ್, ಪ್ಯಾಂಟ್, ಚಡ್ಡಿ ಗಂಡಸರ ಪ್ಯಾಂಟ್, ಶರ್ಟ್ ಸೇರಿ ಅನೇಕ ವಿಧದ ಅಗತ್ಯ ವಸ್ತ್ರಗಳನ್ನು ನೀಡಲಾಯಿತು.

ಈ ವಸ್ತ್ರ ವಿತರಣಾ ಕಾರ್ಯದಲ್ಲಿ ಪುತ್ತೂರಿನ ಹಲವು ಸಮಾಜ ಸೇವಾ ಸಂಘಟನೆಯು ಕೈಜೋಡಿಸಿತ್ತು. ಇ-ಫ್ರೆಂಡ್ಸ್ ಪುತ್ತೂರು, ಎಂಆರ್ ಗೈಸ್ ಪುತ್ತೂರು, ಆಸರೆ ಫೌಂಡೇಶನ್ ಪರ್ಲಡ್ಕ , ಅಲ್ ಅಮೀನ್ ಯಂಗ್ ಮೆನ್ಸ್ ಕಲ್ಲೇಗ, ಹಿತ ರಕ್ಷಣಾ ವೇದಿಕೆ ಕೆಮ್ಮಾರ ಸೇರಿ ಇನ್ನೂ ಅನೇಕ ಸಂಘಟನೆಗಳು ವಿತರಣಾ ಕಾರ್ಯದಲ್ಲಿ ಭಾಗಿಯಾಗಿದ್ದವು.

ಟೀಮ್ ಬಿ-ಹ್ಯೂಮನ್ ಈ ಮೊದಲು ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ನಡೆಸಿದ ಮಾನವೀಯ ಸೇವೆಯು ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೊರೊನ ಸಂದರ್ಭದಲ್ಲಿ ಇದರ ಸದಸ್ಯರು  ಕೊರೋನ ವಾರಿಯರ್ಸ್ ಆಗಿ ಕೆಲಸ ಮಾಡಿದ್ದಲ್ಲದೆ, ಲಾಕ್ ಡೌನ್ ಸಂದರ್ಭ  ಪ್ರತಿದಿನ 750 ವಲಸೆ ಕಾರ್ಮಿಕರಿಗೆ ಆಹಾರ ಪೊಟ್ಟಣಗಳು, 2000 ಕುಟುಂಬಗಳಿಗೆ ದಿನ ಬಳಕೆಯ ದಿನಸಿ ಕಿಟ್ ವಿತರಣೆ, ಪೌರ ಕಾರ್ಮಿಕರಿಗೆ ಕಿಟ್ ವಿತರಣೆ, ಹಲವಾರು ಪ್ರದೇಶಗಳಲ್ಲಿ ಎಲ್ಲಾ ಜಾತಿ ಧರ್ಮದವರಿಗೆ 3400 ಕೋವಿಡ್ ಕಿಟ್ ವಿತರಣೆ, ರಂಝಾನ್ ನಲ್ಲಿ ಉಪವಾಸಿಗ ವಲಸಿಗರಿಗೆ 30 ದಿನಗಳ ಕಾಲ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ, ಲಾಕ್ ಡೌನ್ ನಿಂದ ನಗರ ಪ್ರದೇಶಗಳಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ನೂರಾರು ಮಂದಿಗೆ ಪ್ರತಿದಿನ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಹೀಗೆ ನಿರಂತರವಾಗಿ 3 ತಿಂಗಳುಗಳ ಕಾಲ ಸೇವಾ ಕಾರ್ಯ ನಡೆಸಿ ಸಂಕಷ್ಟದಲ್ಲಿದ್ದ ಜನರಿಗೆ ನೇರವಾಗಿ ಯಶಸ್ವಿಯಾಗಿತ್ತು.

ಅದಲ್ಲದೆ ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ, ಉಚಿತ ಆಂಬುಲೆನ್ಸ್ ಸೇವೆ, ಕೊರೋನ ಸಂದರ್ಭ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೇಕಾದ ಸಹಕಾರ, ಸಾರ್ವಜನಿಕರಿಗೆ ಮಾಸ್ಕ್ ವಿತರಣೆ, ನಮಾಝಿನ ಕೋವಿಡ್ ಮುಸಲ್ಲ (ಪ್ರೇಯರ್ ಮ್ಯಾಟ್) ಹೀಗೆ ಹಲವು ರೀತಿಯ ನೆರವನ್ನು ನೀಡಿದ್ದರು. ಈ ಎಲ್ಲಾ ಕಾರ್ಯವೂ ಟೀಂ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ  ಆಸೀಫ್ ಡೀಲ್ಸ್  ಅವರ ನೇತೃತ್ವದಲ್ಲಿ ನಡೆದಿತ್ತು.

ಅದಲ್ಲದೆ ಪ್ರಮುಖವಾಗಿ ಪುತ್ತೂರು ತಾಲೂಕಿನ ಹಲವು ಜಮಾತಿನ ಎಲ್ಲಾ ಮನೆಗಳಿಗೆ ರಂಝಾನ್ ತಿಂಗಳಿನಲ್ಲಿ ರಂಝಾನ್ ಕಿಟ್ ಮತ್ತು ಈದ್ ಕಿಟ್ ವಿತರಿಣೆ, ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು,  ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ಕೆ ಆರ್ಥಿಕ ಸಹಾಯ, ಸಾರ್ವಜನಿಕರಿಗೆ ಮಾಸ್ಕ್ ವಿತರಣೆ, ನಮಾಝ್ ಮುಸಲ್ಲ (ಪ್ರೇಯರ್ ಮ್ಯಾಟ್) ವಿತರಣೆ ಹೀಗೆ ಹಲವಾರು ಸೇವೆ ಮಾಡಿದೆ.

ಈ ಎಲ್ಲಾ ವಿತರಣಾ ಕಾರ್ಯದಲ್ಲಿ ಟೀಂ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್, ಟೀಂ ಬಿ-ಹ್ಯೂಮನ್ ಪುತ್ತೂರು ಅಧ್ಯಕ್ಷ ಇಮ್ತಿಯಾಝ್ ಪಾರ್ಲೆ, ಟೀಂ ಬಿ-ಹ್ಯೂಮನ್ ಸದಸ್ಯರಾದ ಅಶ್ರಫ್ ಐನಾ, ಅಲ್ತಾಫ್, ಸಲೀಂ ಯು.ಬಿ, ಅಹ್ನಫ್ ಡೀಲ್ಸ್, ಶಮೀಮ್, ನವಾಝ್ ಪ್ಲಾನೆಟ್, ಬಾಷಾ ಕಂಡತ್ಪಳ್ಳಿ, ಸಿರಾಜ್ ಡೀಲ್ಸ್, ಮುಝಮ್ಮಿಲ್ ಚಾಯ್ಸ್, ಅನ್ಸಾರ್ ಪರ್ಲಡ್ಕ, ಬಾತಿಶ್ ಬಲ್ನಾಡ್, ಆಸಿಫ್ ಐಡಿಯಾ, ಖಾದರ್, ಅತಾವುಲ್ಲಾ, ಅಬ್ದುಲ್ ಗಫಾರ್, ನಿಝಾಮ್, ಸಿದ್ದಿಕ್, ನಝೀರ್, ಹಾಶಿರ್ ಕರಾಯ, ರಿಝ, ರಾಶಿಮ್ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News