ಉಡುಪಿ: ಆರು ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

Update: 2021-01-16 14:19 GMT

ಉಡುಪಿ, ಜ.16: ಉಡುಪಿ ಜಿಲ್ಲಾಡಳಿತ, ಜಿಪಂ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶನಿವಾರ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉಡುಪಿ ಜಿಪಂ ಅಧ್ಯಕ್ಷ ದಿಕನರ ಬಾಬು ಉದ್ಘಾಟಿಸಿ ದರು. ಆಸ್ಪತ್ರೆಯ ಅರವಳಿಕೆ ತಜ್ಞ ಡಾ.ಗಣಪತಿ ಹೆಗ್ಡೆ, ಡಿ ಗ್ರೂಪ್ ನೌಕರರಾದ ಬಸವರಾಜ ದಳವಾಯಿ ಮತ್ತು ರಮೇಶ್ ರಕ್ಮೋಜಿ ಅವರಿಗೆ ‘ಕೋವಿ ಶೀಲ್ಡ್’ ಲಸಿಕೆ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಕೋವಿಡ್ ಲಸಿಕಾ ಅಧಿಕಾರಿ ಡಾ.ಎಂ.ಜಿ.ರಾಮ ಲಸಿಕೆ ಪಡೆದರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಮೀ ಮಂಜುನಾಥ್, ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕೋವಿಡ್ ವಿಶೇಷಾಧಿಕಾರಿ ಡಾ. ಪ್ರೇಮಾನಂದ ಮೊದಲಾದವರು ಉಪಸ್ಥಿತರಿದ್ದರು.

ಆರು ಕೇಂದ್ರಗಳಲ್ಲಿ ಲಸಿಕೆ: ಮೊದಲ ಹಂತದಲ್ಲಿ ಜಿಲ್ಲೆಯ ಆರು ಲಸಿಕಾ ಕೇಂದ್ರಗಳಲ್ಲಿ ಇಂದು ಈಗಾಗಲೇ ಪಟ್ಟಿ ಮಾಡಿರುವ ಆರೋಗ್ಯ ಕಾರ್ಯ ಕರ್ತರಿಗೆ ಲಸಿಕೆಯನ್ನು ನೀಡಲಾಯಿತು.

ಐದು ಸರಕಾರಿ ಕೇಂದ್ರಗಳಾದ ಉಡುಪಿ ಜಿಲ್ಲಾಸ್ಪತ್ರೆ, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆ ಮತ್ತು ಒಂದು ಖಾಸಗಿ ಕೇಂದ್ರ ಆಗಿರುವ ಉಡುಪಿ ಟಿಎಂಎ ಪೈ ಆಸ್ಪತ್ರೆಯಲ್ಲಿ ಲಸಿಕೆಯನ್ನು ನೀಡಲಾಯಿತು.

ಇದರಲ್ಲಿ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 38 ಮಂದಿ ಮಾತ್ರ ಆರೋಗ್ಯ ಕಾರ್ಯಕರ್ತರು ಇರುವುದರಿಂದ ಈ ಲಸಿಕಾ ಕೇಂದ್ರದಲ್ಲಿ 100ರ ಬದಲು 38 ಮಂದಿ, ಉಳಿದಂತೆ ಐದು ಕೇಂದ್ರಗಳ ತಲಾ 100ರಂತೆ ಒಟ್ಟು ಆರು ಕೇಂದ್ರಗಳಲ್ಲಿ ಒಟ್ಟು 538 ಮಂದಿಗೆ ಲಸಿಕೆ ನೀಡುವ ಗುರಿ ಹೊಂದ ಲಾಗಿತ್ತು. ಅದರಂತೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

''ಮೊದಲ ಹಂತದ ಲಸಿಕೆ ಪಡೆಯಲು ಜಿಲ್ಲೆಯಲ್ಲಿ 22,333 ಮಂದಿ ಆರೋಗ್ಯ ಕಾರ್ಯಕರ್ತರು ನೊಂದಣಿಯಾಗಿದ್ದು, ಜಿಲ್ಲೆಗೆ 12,000 ಲಸಿಕೆ ಬಂದಿದೆ. ಒಟ್ಟು ಜಿಲ್ಲೆಯಲ್ಲಿ 258 ಶಿಬಿರಗಳನ್ನು ಆಯೋಜಿಸಿ ಲಸಿಕೆ ನೀಡಲು ಮೈಕ್ರೋ ಪ್ಲಾನಿಂಗ್ ತಯಾರಿಸ ಲಾಗಿದೆ. 139 ಮಂದಿ ಲಸಿಕೆ ನೀಡುವವರಿಗೆ ತರಬೇತಿ ನೀಡಲಾಗಿದೆ. ಜ.20ರೊಳಗೆ ಕೊರೋನಾ ವಾರಿಯರ್ಸ್‌ಗಳ ಎರಡನೆ ಹಂತದ ಪಟ್ಟಿಯನ್ನು ತಯಾರಿಸಿ, ಕೇಂದ್ರಕ್ಕೆ ಸಲ್ಲಿಸಲಾಗುವುದು. ಜಿಲ್ಲೆಗೆ ಹಂತ ಹಂತವಾಗಿ ಲಸಿಕೆ ಬರಲಿದ್ದು, ನೊಂದಣಿ ಮಾಡಿದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು''.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

''ಕೇಂದ್ರ ಸರಕಾರ ಸಾಕಷ್ಟು ಪರಿಶೀಲಿಸಿಯೇ ಈ ಲಸಿಕೆಯನ್ನು ಅಂತಿಮ ಗೊಳಿಸಿದೆ. ಕೋವಿಡ್ ವಾರಿಯರ್ಸ್‌ಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡು ತ್ತಿರುವುದು ಒಳ್ಳೆಯ ಆಲೋಚನೆಯಾಗಿದೆ. ಈ ಲಸಿಕೆಯ ಬಗ್ಗೆ ಸಾಕಷ್ಟು ಕುತೂಹಲ, ಭಯ, ಅಪ ಪ್ರಚಾರಗಳು ಇವೆ. ಆದರೆ ಇದಕ್ಕೆಲ್ಲ ಕಿವಿಗೊಡದೆ ಎಲ್ಲರ ರಕ್ಷಣೆಗಾಗಿ ಬಂದಿರುವ ಈ ಲಸಿಕೆಯನ್ನು ಎಲ್ಲರೂ ಧೈರ್ಯದಿಂದ ತೆಗೆದುಕೊಳ್ಳಬೇಕು''.
-ಡಾ.ಗಣಪತಿ ಹೆಗ್ಡೆ, ಅರವಳಿಕೆ ತಜ್ಞರು(ಪ್ರಥಮವಾಗಿ ಲಸಿಕೆ ಸ್ವೀಕರಿಸಿದವರು)

''ಲಸಿಕೆ ತೆಗೆದುಕೊಂಡಿದ್ದೇವೆ. ಯಾವುದೇ ಅಡ್ಡ ಪರಿಣಾಮ ನಮ್ಮಲ್ಲಿ ಈವರೆಗೆ ಕಂಡುಬಂದಿಲ್ಲ. ಯಾವುದೇ ರೀತಿ ನೋವು ಕೂಡ ಆಗಿಲ್ಲ. ಯಾವುದೇ ರೀತಿಯ ದುಷ್ಪಾರಿಣಾಮ ಇಲ್ಲದ ಈ ಲಸಿಕೆಯನ್ನು ಎಲ್ಲರು ತೆಗೆದುಕೊಳ್ಳ ಬಹುದು. ನಾನು ಮೊದಲು ಲಸಿಕೆ ತೆಗೆದುಕೊಂಡಿರುವುದಕ್ಕೆ ನನಗೆ ಹೆಮ್ಮೆ ಆಗುತ್ತದೆ''.
-ಬಸವರಾಜ ದಳವಾಯಿ, ಡಿ ಗ್ರೂಪ್ ನೌಕರ(ಪ್ರಥಮವಾಗಿ ಲಸಿಕೆ ಸ್ವೀಕರಿಸಿದವರು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News