'ಕೆಬಿಸಿಯ ಹಣ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಮೀಸಲು'

Update: 2021-01-16 15:13 GMT

ಉಡುಪಿ, ಜ.16: ‘ಸೋನಿ ಚಾನೆಲ್‌ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿ ಕೊಡುವ ಕೌನ್ ಬನೇಗಾ ಕರೋಡ್‌ಪತಿ(ಕೆಬಿಸಿ) ಕಾರ್ಯಕ್ರಮದ ‘ಕರ್ಮವೀರ್’ ವಿಶೇಷ ಎಪಿಸೋಡ್‌ನಲ್ಲಿ ಪಾಲ್ಗೊಂಡು ಗಳಿಸಿದ ಪೂರ್ತಿ ಹಣ ವನ್ನು ಅನಾರೋಗ್ಯ ಪೀಡಿತ ಅರ್ಹ ಮಕ್ಕಳ ಚಿಕಿತ್ಸೆ ನೀಡಬೇಕೆಂದು ಯೋಚನೆ ಮಾಡಿದ್ದೇನೆ. ಇದರಲ್ಲಿ ನನಗೆ ಯಾವುದೇ ಹಣವನ್ನು ಇಟ್ಟುಕೊಳ್ಳುವುದಿಲ್ಲ’
ಕಳೆದ ಆರು ವರ್ಷಗಳಿಂದ ಉಡುಪಿ ಶ್ರೀಕೃಷ್ಣಾಷ್ಟಮಿಯ ದಿನ ವಿವಿಧ ವೇಷ ಗಳನ್ನು ಧರಿಸಿ ಸಂಗ್ರಹಿಸಿದ 54.5ಲಕ್ಷ ರೂ. ಹಣವನ್ನು ಒಟ್ಟು 28 ಮಕ್ಕಳ ಚಿಕಿತ್ಸೆ ನೀಡುವ ಮೂಲಕ ಜನಮನ್ನಣೆ ಗಳಿಸಿ ಕೆಬಿಸಿಗೆ ಆಯ್ಕೆಯಾದ ಸೆಂಟ್ರಿಂಗ್ ಕಾರ್ಮಿಕ ರವಿ ಕಟಪಾಡಿ ಇಂದು ಮಾಧ್ಯಮದವರೊಂದಿಗೆ ಆಡಿದ ಮಾತುಗಳಿವು.

‘ನನಗೆ ನೀಡಿದ ಸಮಯದಲ್ಲಿ ನಾನು ಏಳು ಪ್ರಶ್ನೆಗಳಿಗೆ ಉತ್ತರ ನೀಡಿದೆ. ನನ್ನ ಜೊತೆ ಇನ್ನೊಬ್ಬರು ಸಾಧಕ ಮಹಿಳೆ ಕೂಡ ಪಾಲ್ಗೊಂಡಿದ್ದರು. ನಾವಿಬ್ಬರು ಜೊತೆಯಾಗಿ ಆಡಿ ಒಟ್ಟು 25ಲಕ್ಷ ರೂ. ಗಳಿಸಿದೆವು. ಅದರಲ್ಲಿ ಸಮಪಾಲು ಮಾಡಿ ನಮಗೆ ತಲಾ 12.5ಲಕ್ಷ ರೂ. ಹಣವನ್ನು ಹಂಚಿಕೆ ಮಾಡಿದ್ದಾರೆ’ ಎಂದು ರವಿ ಕಟಪಾಡಿ ತಿಳಿಸಿದರು.

ಮೊದಲು ನಿರಾಕರಿಸಿದ್ದೆ: ‘ಕೆಲವು ಸಮಯಗಳ ಹಿಂದೆ ಸೋನಿ ಚಾನೆಲ್ ನಿಂದ ಕರೆ ಮಾಡಿ ಕೆಬಿಸಿ ಆಯ್ಕೆಯಾಗಿರುವ ವಿಚಾರ ತಿಳಿಸಿದರು. ಆದರೆ ನಾನು ಅಲ್ಲಿನ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಹೇಳಿ, ಅದನ್ನು ನಿರಾಕರಿಸಿದೆ. ಹೀಗೆ ನಿರಂತರ ನಾಲ್ಕು ದಿನಗಳ ಕರೆ ಮಾಡಿದರು. ನಮಗೆ ಉತ್ತರ ನೀಡುವುದು ಮುಖ್ಯ ಅಲ್ಲ, ನಿಮ್ಮ ಸಾಧನೆಯನ್ನು ಇಡೀ ಜಗತ್ತಿಗೆ ತೋರಿಸಿ, ಆ ಮೂಲಕ ಇತರರು ಸ್ಪೂರ್ತಿ ಪಡೆಯ ಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದಾಗ ನಾನು ಖುಷಿಯಲ್ಲಿ ಒಪ್ಪಿಕೊಂಡೆ’ ಎಂದು ರವಿ ಕಟಪಾಡಿ ಮನಬಿಚ್ಚಿ ಹೇಳಿಕೊಂಡರು.

ವಿಮಾನ ಮೂಲಕ ಮುಂಬೈಗೆ ತೆರಳಿದೆ. ಅಲ್ಲಿ ಫ್ಲೈಸ್ಟಾರ್ ಹೊಟೇಲ್‌ನಲ್ಲಿ ನಮಗೆ ತಂಗಲು ವ್ಯವಸ್ಥೆ ಮಾಡಿದರು. ಇದೆಲ್ಲ ನನ್ನ ಜೀವನದಲ್ಲಿ ಹೊಸ ಅನುಭವಗಳು. ಕಾರ್ಯಕ್ರಮದಲ್ಲಿ ಪ್ರಶ್ನೆಗಳು ಅರ್ಥ ಆಗದಿದ್ದಾಗ ನನಗೆ ಖ್ಯಾತ ನಟ ಅನುಪಮ್ ಖೇರ್ ಎಲ್ಲ ರೀತಿಯಲ್ಲಿ ಸಹಕಾರ ನೀಡಿದರು. ಪ್ರಶ್ನೆಗಳನ್ನು ಬಿಡಿಸಿ ಹೇಳಿ ಅರ್ಥ ಮಾಡಿಸಿದರು ಮತ್ತು ಎಲ್ಲ ರೀತಿಯಲ್ಲಿ ಧೈರ್ಯ ತುಂಬಿದರು ಎಂದು ರವಿ ಕಟಪಾಡಿ ತಿಳಿಸಿದರು.

ಬಚ್ಚನ್‌ರ ತುಳು ಮಾತು: ಅಮಿತಾಬ್ ಬಚ್ಚನ್ ನನ್ನ ಕಣ್ಣ ಮುಂದೆ ಬಂದು ನಿಂತಾಗ ನನಗೆ ಕಣ್ಣಲ್ಲಿ ನೀರು ಬಂತು. ಎಷ್ಟೋ ಮಂದಿ ಅವರನ್ನು ನೋಡಲು ಹಾತೋರಿಯುತ್ತಿರುವಾಗ ನನಗೆ ಈ ಅವಕಾಶ ಸಿಕ್ಕಿರುವುದು ಮರೆಯಲಾಗದ ಘಟನೆ ಎಂದು ರವಿ ಕಟಪಾಡಿ ಹೇಳಿದರು.

‘ನೀವು ನನಗಿಂತ ದೊಡ್ಡ ಕಲಾವಿದ. ನೀವು ಮಾಡುವ ಕೆಲಸ ಎಲ್ಲಗಿಂತ ಮಿಗಿಲು. ಇದನ್ನು ನಿಲ್ಲಿಸದೆ ಮುಂದುವರೆಸಿ’ ಎಂದು ಬಚ್ಚನ್ ನನಗೆ ಹಿತ ನುಡಿದರು ಎಂದು ಅವರು ಹೇಳಿದರು.

ಹಾಟ್ ಸೀಟ್‌ನಲ್ಲಿ ಕುಳಿತು ಅಮಿತಾಬ್ ಬಚ್ಚನ್ ಅವರಲ್ಲಿ ನಮ್ಮ ತುಳು ಭಾಷೆಯನ್ನು ಮಾತನಾಡಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದಕ್ಕೆ ಅವರು ಒಪ್ಪಿ, ನಾನು ಹೇಳಿದಂತೆ ‘ಉಡುಪಿ ಬೊಕ್ಕ ಕುಡ್ಲದ ಮಾತಾ ಜನಕುಲೆಗ್ ಮೊಕೆದ ನಮಸ್ಕಾರ’ ಎಂದು ಹೇಳಿದರು. ಇದರಿಂದ ನನಗೆ ತುಂಬಾ ಖುಷಿ ಯಾಯಿತು ಎಂದು ರವಿ ಕಟಪಾಡಿ ತಿಳಿಸಿದರು.

ಈಗ ಕೆಲಸ ಕೊಡುವವರಿಲ್ಲ!

ಸೆಂಟ್ರಿಂಗ್ ಸೇರಿದಂತೆ ಕೂಲಿ ಕೆಲಸ ಮಾಡಿಕೊಂಡಿದ್ದೇನೆ. ಆದರೆ ನಾನು ಇಷ್ಟು ಎತ್ತರಕ್ಕೆ ಬೆಳೆದು, ಮಾಧ್ಯಮಗಳಲ್ಲಿ ನನ್ನ ಹೆಸರು ಬಂದ ನಂತರ ಕಳೆದ ನಾಲ್ಕೈದು ವರ್ಷಗಳಿಂದ ನನಗೆ ಯಾರೂ ಕೂಡ ಕೆಲಸ ಕೊಡುತ್ತಿಲ್ಲ ಎಂದು ರವಿ ಕಟಪಾಡಿ ಆಳಲು ತೋಡಿ ಕೊಂಡರು.

‘ನಾನು ಈಗಲೂ ರಸ್ತೆ ಬದಿ ಗುಂಡಿ ತೆಗೆಯುವಂತಹ ಕೆಲಸಕ್ಕೂ ರೆಡಿ ಇದ್ದೇನೆ. ಆದರೆ ಜನ ಅಷ್ಟು ದೊಡ್ಡ ವ್ಯಕ್ತಿಯಿಂದ ಇಂತಹ ಕೆಲಸ ಮಾಡಿಸುವುದೇ ಎಂದು ಹೇಳಿ ಕೆಲಸ ಕೊಡುತ್ತಿಲ್ಲ. ನನಗೆ ಇದೇ ಕೆಲಸದಿಂದ ಹೊಟ್ಟೆ ತುಂಬಬೇಕಾಗಿದೆ’ ಎಂದರು.

ಅಕ್ಕನ ಮಗಳನ್ನು ನೆನೆದು ಕಣ್ಣೀರಿಟ್ಟರು

28 ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸಿ ನೀಡಿದ ರವಿ ಕಟಪಾಡಿ, ತನ್ನ ಸ್ವಂತ ಅಕ್ಕನ ಮಗಳ ಚಿಕಿತ್ಸೆ ಹಣ ಹೊಂದಿಸಲಾಗದೆ ಕಳೆದುಕೊಂಡ ಬಗ್ಗೆ ನೆನೆದು ಕಣ್ಣೀರಿಟ್ಟರು.

‘ನಮ್ಮ ತಂಡ ಮಾಡಿಕೊಂಡ ನಿಯಮದ ಪ್ರಕಾರ ವೇಷ ಹಾಕಿ ಸಂಗ್ರಹ ಆಗಿರುವ ಹಣದಲ್ಲಿ 16ವರ್ಷದೊಳಗಿನ ಮಕ್ಕಳಿಗೆ ಮಾತ್ರ ಸಹಾಯ ನೀಡಬೇಕು ಎಂಬುದಾಗಿತ್ತು. ವರ್ಷದ ಹಿಂದೆ ನನ್ನ ಅಕ್ಕನ 20 ವರ್ಷ ವಯಸ್ಸಿನ ಮಗಳು ಕ್ಯಾನ್ಸರ್ ಕಾಯಿಲೆಗೆ ತುತ್ತಾದರು. ಆಗ ನಮ್ಮವರು ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ಆಕೆಯ ಚಿಕಿತ್ಸೆಗೆ ಬಳಸಲು ಕೇಳಿಕೊಂಡರು. ಆದರೆ ನನಗೆ ನಾನು ಮಾಡಿಕೊಂಡ ನಿಯಮವನ್ನು ಮುರಿಯಲು ಇಷ್ಟ ಇರಲಿಲ್ಲ. ಆಕೆಯ ಚಿಕಿತ್ಸೆಗೆ ಅದರಿಂದ ಒಂದು ನಯಾ ಪೈಸೆ ಕೂಡ ತೆಗೆದುಕೊಂಡಿಲ್ಲ’ ಎಂದು ರವಿ ಕಟಪಾಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News