150 ನೂತನ ‘ತುರ್ತು ಸ್ಪಂದನ ಸಹಾಯ ವ್ಯವಸ್ಥೆ'ಯ ವಾಹನಗಳಿಗೆ ಅಮಿತ್ ಶಾ ಹಸಿರು ನಿಶಾನೆ

Update: 2021-01-16 15:28 GMT

ಬೆಂಗಳೂರು, ಜ. 16: ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಂಕಷ್ಟದಲ್ಲಿರುವ ನಾಗರಿಕರಿಗೆ ತಕ್ಷಣವೇ ಸ್ಪಂದಿಸುವ ‘ಒಂದು ಭಾರತ-ಒಂದು ತುರ್ತು ಸಂಖ್ಯೆ-112' ತುರ್ತು ಸ್ಪಂದನ ಸಹಾಯ ವ್ಯವಸ್ಥೆ(ಇಆರ್‍ಎಸ್‍ಎಸ್)ಯ 150 ನೂತನ ವಾಹನಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಶನಿವಾರ ವಿಧಾನಸೌಧದ ಮುಂಭಾಗದಲ್ಲಿನ ಮೆಟ್ಟಿಲುಗಳ ಮೇಲೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಉಪಸ್ಥಿತಿಯಲ್ಲಿ ತುರ್ತು ವಾಹನಗಳಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ದೇಶಾದ್ಯಂತ ಒಂದೇ ತುರ್ತು ಸಂಖ್ಯೆ-112 ಅನ್ನು ಹೊಂದಿದೆ. ರಾಜ್ಯದಲ್ಲಿ ಈಗಾಗಲೇ 505 ತುರ್ತು ಸ್ಪಂದನ ವಾಹನಗಳಿದ್ದು, ಇದೀಗ ಹೊಸದಾಗಿ 150 ವಾಹನಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂದರು.

ತುರ್ತು ಸಂದರ್ಭಗಳಲ್ಲಿ ಸಂಕಷ್ಟದಲ್ಲಿರುವ ಯಾರೇ ಮೇಲ್ಕಂಡ ಸಂಖ್ಯೆಗೆ ಕರೆ ಮಾಡಿದರೆ ಅವರಿಗೆ 15 ಸೆಕೆಂಡ್‍ಗಳಲ್ಲಿ ಸ್ಪಂದಿಸಲಾಗುವುದಲ್ಲದೆ, ಕೇವಲ 15 ನಿಮಿಷಗಳಲ್ಲಿ ಅವರಿಗೆ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ(ಇಆರ್‍ಎಸ್‍ಎಸ್) ವಾಹನಗಳು ನೆರವಾಗಲಿವೆ ಎಂದು ಅವರು ತಿಳಿಸಿದರು.

ತುರ್ತು ಸಂದರ್ಭಗಳಲ್ಲಿ ಸಂಕಷ್ಟದಲ್ಲಿರುವ ಜನರು ಪೊಲೀಸ್, ಅಗ್ನಿಶಾಮಕದಳ, ಮಹಿಳಾ ಸಹಾಯವಾಣಿ ಮತ್ತು ಮಕ್ಕಳ ಸಹಾಯವಾಣಿ ಸಂಖ್ಯೆಗೆ ಪ್ರತ್ಯೇಕವಾಗಿ ಕರೆ ಮಾಡಬೇಕಿತ್ತು. ಇದೀಗ ಒಂದು ದೇಶ-ಒಂದು ತುರ್ತು ಸಂಖ್ಯೆ ಪರಿಕಲ್ಪನೆಯಲ್ಲಿ ಏಕರೂಪ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News