'ಮುಕ್ಕ ಸೀ ಫುಡ್ ಇಂಡಸ್ಟ್ರೀಸ್' ವ್ಯವಹಾರ ಪಾರದರ್ಶಕ, ಸ್ಥಳೀಯರಿಗೆ ತೊಂದರೆಯಾಗಿಲ್ಲ: ಮೀನುಗಾರರ ಮುಖಂಡರು

Update: 2021-01-16 15:41 GMT

ಮಂಗಳೂರು : ಕಳೆದ 65 ವರ್ಷಗಳಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ಹಲವಾರು ಕುಟುಂಬಕ್ಕೆ ಆಧಾರವಾಗಿರುವ ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪನಿಯ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದೆ. ಯಾವುದೇ ಆಧಾರವಿಲ್ಲದೇ, ಅಧಿಕೃತ ದಾಖಲೆಗಳಿಲ್ಲದೇ ಬೆರಳೆಣಿಕೆಯ ಮಂದಿಯಿಂದ ಸಂಸ್ಥೆಯ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಸ್ಥಳೀಯ ಮೀನುಗಾರರ ಮುಖಂಡ ಹಾಗೂ ಮಿತ್ರ ಪಟ್ನ ಮೀನುಗಾರರ ವಿವಿದ್ಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಸಂತ ಸುವರ್ಣ  ಮತ್ತು ಸ್ಥಳೀಯ ಮೀನುಗಾರರ ಮುಖಂಡರಾದ ಅನಿಲ್ ಸಾಲ್ಯಾನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪನಿಯ ಫಲಾನುಭವಿಗಳು ಹಾಗೂ ಅದರ ಸುತ್ತಮುತ್ತ ಇರುವ 60ರಿಂದ 80 ಮಂದಿ ನಾಗರಿಕರಾದ ನಾವು ಈ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತಿದ್ದೇವೆ. ಇದು ಯಾವುದೇ ರೀತಿಯಲ್ಲೂ ಕಂಪೆನಿಯ ಪರವಾಗಿ ವಾದವಲ್ಲ, ಬದಲಾಗಿ ವಾಸ್ತವ ಸ್ಥಿತಿಯಲ್ಲಿ ಸಂಸ್ಥೆಯು ನಡೆಸುತ್ತಿರುವ ಕಾರ್ಯ ವೈಖರಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಾಗಿದೆ.

ಇತ್ತೀಚೆಗೆ ದೂರುದಾರರೊಬ್ಬರು  "ಕಂಪೆನಿಯು ನಿಯಮಗಳನ್ನು ಪಾಲಿಸುತ್ತಿಲ್ಲ "ಎಂದು ಆರೋಪಿಸಿದ್ದಾರೆ. ಆದರೆ ಸಂಸ್ಥೆಯಲ್ಲಿ ಪ್ರತೀ ತಿಂಗಳು ಪರಿಸರ ತಜ್ಞರು, ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ನಮ್ಮ ಸುತ್ತಮುತ್ತ ಇರುವ ಜನರ ಅಭಿಪ್ರಾಯವನ್ನು ಮುಕ್ತವಾಗಿ ಸಂಗ್ರಹಿಸುತ್ತಿದ್ದಾರೆ. ಮೀನು ಸಂಸ್ಕರಣ ಘಟಕ ಎಂದರೇ ಸ್ವಲ್ಪ ವಾಸನೆ ಬರುವುದು ಸಹಜ ಆದರೆ ಅದು ಕೆಟ್ಟ ವಾಸನೆ, ಆರೋಗ್ಯಕ್ಕೆ ಅಪಾಯಕಾರಿ ಎಂಬುದು ಸತ್ಯಕ್ಕೆ ದೂರವಾಗಿದೆ. ನಮಗೆ ಮಾಹಿತಿ ತಿಳಿದಂತೆ ಸಂಸ್ಥೆಯ ಎಲ್ಲಾ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಂಡಿದೆ, ಪರಿಸರ ಇಲಾಖೆಯ ಸೂಚನೆಗಳನ್ನು ಆಗಾಗ ಪಾಲಿಸುತ್ತಿದೆ. ಈ ಬಗ್ಗೆ ಯಾರೂ ಬೇಕಾದರೂ ಭೇಟಿ ನೀಡಿ, ಪರಿಶೀಲನೆ ನಡೆಸಬಹುದು ಎಂದು ಕಂಪೆನಿಯ ಮಾಲಕರೇ ಹೇಳಿದ್ದಾರೆ.

ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪೆನಿಯು ಕೇವಲ ಕೈಗಾರಿಕಾ ಸ್ಥಾಪನೆಗೆ ಆಸಕ್ತಿ ಹೊಂದಿರುವುದಿಲ್ಲ ಕೈಗಾರಿಕೆಯೊಂದಿಗೆ, ಸ್ಥಳೀಯ ಜನರ ಪರವಾಗಿ ಹಲವಾರು ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ, ಸಂಸ್ಥೆಯಲ್ಲಿರುವ ಸುಮಾರು 200 ಮಂದಿ ಕೆಲಸಗಾರರಲ್ಲಿ ಶೇ.80 ಮಂದಿ ಸ್ಥಳೀಯರೇ ಆಗಿದ್ದಾರೆ. ಅವರಿಗೆ ಕಾರ್ಮಿಕ ಇಲಾಖೆಯ ಕಾಯ್ದೆಯಂತೆಯೇ ಉದ್ಯೋಗ ನೀಡಲಾಗಿದೆ. ಕಂಪೆನಿಗೆ ಸ್ಥಳೀಯ 100ಕ್ಕೂ ಮಿಕ್ಕಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಹಿಡಿದ ಮೀನನ್ನು ನೇರವಾಗಿ ಮಾರುಕಟ್ಟೆಯ ಬೆಲೆಯಲ್ಲಿ ಖರೀದಿಸಿ ಪ್ರೋತ್ಸಾಹಿಸುತ್ತಿದೆ. ಇದರೊಂದಿಗೆ ಸ್ಥಳೀಯ ಎಲ್ಲಾ ಸೇವಾ ಸಂಸ್ಥೆಗಳ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕಾರ್ಯಕ್ರಮಕ್ಕೆ ಮುಕ್ತ ನೆರವನ್ನು ನೀಡುತ್ತಿದೆ, ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ನೀಡುತ್ತಿದೆ. ಬಡ ಹೆಣ್ಣು ಮಕ್ಕಳ ಮದುವೆಗೆ, ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣಕ್ಕೆ ವಿಶೇಷ ನಿಧಿಯನ್ನು ನೀಡುತ್ತಿದೆ. ಇಂತಹ ಜನಪರ ಸಂಸ್ಥೆಯ ಬಗ್ಗೆ ಅಪ ಪ್ರಚಾರ ಮಾಡುವುದನ್ನು ಕೂಡಲೆ ನಿಲ್ಲಿಸಬೇಕು. ನನಗೆ ತಿಳಿದಿರುವಂತೆ ಸುಮಾರು 60,  ವರ್ಷಗಳ ಹಿಂದೆ ಈ ಕಂಪೆನಿಗಳು ಬರುವ ಮೊದಲು ಮೀನುಗಾರರಿಗೆ ಮಾರಾಟವಾಗದ ಮೀನುಗಳಿಗೆ ಬೆಲೆ ಇಲ್ಲದೆ ಅವರ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿತ್ತು. ಈ ಕಂಪೆನಿಗಳು ಬಂದ ಬಳಿಕ ನಾವು ಮಾರಾಟ ಮಾಡಲಾಗದೆ ಎಸೆಯುತ್ತಿದ್ದ ತ್ಯಾಜ್ಯ ಮೀನು ಗಳನ್ನು ಅವರು ಕಾರ್ಖಾನೆಗಳಿಗೆ ಖರೀದಿಸುತ್ತಿದ್ದ ಕಾರಣ ನಮಗೆ ಆದಾಯ ದೊರೆಯುತ್ತಿದೆ. ಹಲವಾರು ಜನರಿಗೆ ಉದ್ಯೋಗವಾಗಿದೆ. ನಮಗೆ ಸಮಸ್ಯೆ ಆಗಿಲ್ಲ " ಎಂದು ವಸಂತ ಸುವರ್ಣ ತಿಳಿಸಿದ್ದಾರೆ.

ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪನಿಯ ಬಗ್ಗೆ ಪ್ರಬಂಧಕರ ಸ್ಪಷ್ಟನೆ

ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪೆನಿ ಇಂದು ಪರಿಸರದಲ್ಲಿ ಮಾತ್ರವಲ್ಲ ಜಿಲ್ಲೆ, ರಾಜ್ಯ, ರಾಷ್ಟ್ರದಲ್ಲಿಯೂ ಉತ್ತಮ ಕಂಪೆನಿಯಾಗಿ ಹೆಸರು ಪಡೆದುಕೊಂಡಿದೆ. ಇಲ್ಲಿ ಯಾವುದೇ ರೀತಿಯಲ್ಲಿಯೂ ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಿಯೇ ನಡೆಯುತ್ತಿದೆ.  ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಡೆಸಲಾಗುತ್ತಿದೆ.

ಪ್ರತೀ ವರ್ಷವೂ ಕೈಗಾರಿಕಾ ನೀತಿ ನಿಯಮಗಳಂತೆ ಎಲ್ಲಾ ಕಾಯ್ದೆಗಳನ್ನು ಪಾಲಿಸಿಕೊಂಡೇ ಕಂಪೆನಿ ನಡೆಯುತ್ತಿದೆ, ಕಾರ್ಮಿಕರ ಭದ್ರತೆಗೆ ವಿಶೇಷ ಆದ್ಯತೆ ನೀಡಿದೆ. ಈ ಬಗ್ಗೆ ಯಾವುದೇ ರೀತಿಯಲ್ಲಿಯೂ ಸಂಶಯವಿಲ್ಲ. ಮೀನನ್ನು ನೇರವಾಗಿ ಹಿಂದಿನ ಪದ್ಧತಿಯಂತೆ ಸುಡುವ ವ್ಯವಸ್ಥೆಯಲ್ಲಿ ಬದಲಾಗಿ, ಅದನ್ನು ಸೂಕ್ತವಾಗಿ ಸಂಸ್ಕರಿಸಿಕೊಂಡೇ ಉತ್ಪನ್ನಗಳು ತಯಾರಾಗುತ್ತಿದೆ. ಹೊಗೆ ಹಾಗೂ ತ್ಯಾಜ್ಯವನ್ನು ಹೊರಬಿಡುವಾಗ ಎಲ್ಲಾ ಸೂಚನೆಗಳು ಪಾಲಿಸಿಕೊಂಡೇ ನಿರ್ವಹಣೆ ನಡೆಸುತ್ತಿದ್ದೇವೆ. ನಿಯಮಗಳು ಮೀರಿದಲ್ಲಿ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಕ್ರಮ ಕೈಗೊಳ್ಳುತ್ತದೆ ಎಂಬ ಎಚ್ಚರಿಕೆಯೂ ನಮ್ಮಲ್ಲಿದೆ. ಕಳೆದ 65 ವರ್ಷದಿಂದ ಇರದ ಆಕ್ಷೇಪ ಈಗ ಯಾಕೆ ಎಂಬುದು ನಮ್ಮ ಪ್ರಶ್ನೆಯಾಗಿದೆ. ದೂರುದಾರರು ಬೇಕಾದಲ್ಲಿ ಯಾವುದೇ ಇಲಾಖೆಯ ಮೂಲಕವು ನಮ್ಮ ಕಂಪನಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಬಹುದು, ಇತ್ತೀಚೆಗೆ ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಸಹ ಕಂಪೆನಿಗೆ ಬಂದು ಪರಿಶೀಲನೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಶಬ್ಧ ಮಾಲಿನ್ಯವಾಗಲಿ ನಡೆದಿಲ್ಲ, ಕಪ್ಪು ಹೊಗೆಯ ಬಗ್ಗೆ ತಪ್ಪು ಕಲ್ಪನೆ ಹೊಂದಿರುವ ದೂರುದಾರರು ಆಕ್ಷೇಪಿಸಿರುವುದಕ್ಕೆ ಇಲಾಖೆಯ ಮೂಲಕವೇ ಉತ್ತರಿಸಿದ್ದೇವೆ.
ಕಂಪೆನಿಯು ಸ್ಥಳೀಯರಿಗೆ ಗೌರವ ನೀಡುತ್ತಿದೆ. ಸುತ್ತಮುತ್ತ ಶುಭ ಕಾರ್ಯಕ್ರಮ ನಡೆದಾಗ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಂಪೆನಿಗೆ ಬರುವ ಸರಕು ವಾಹನಗಳಿಗೆ ಅವಕಾಶ ನೀಡದೇ ಸಹಕಾರ ನೀಡುತ್ತಿದ್ದೇವೆ. ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಕಂಪೆನಿಯು ನಡೆಸಿಕೊಂಡು ಬರುತ್ತಿದೆ. ಇದಕ್ಕಾಗಿ ಜನಸ್ನೇಹಿ ಕಂಪೆನಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಅದರಲ್ಲೂ ಪರಿಸರ ಸಂಬಂಧಿತ ವಿಶೇಷ ಪುರಸ್ಕಾರಗಳನ್ನು ಸರಕಾರಿ ಹಾಗೂ ಖಾಸಗಿ ಎನ್‌ಜಿಒಗಳ ಮೌಲ್ಯ ಮಾಪನದಿಂದ ಗಣ್ಯರ ಸಮ್ಮುಖದಲ್ಲಿ ಪಡೆದುಕೊಂಡಿದ್ದೇವೆ. ಸರಕಾರಕ್ಕೆ ತೆರಿಗೆಯನ್ನು ನಿಯಮದಂತೆ ಸಲ್ಲಿಸುತ್ತಿದ್ದೇವೆ, ಪ್ರಸ್ತುತ ವರ್ಷದಲ್ಲಿ ಹೊರದೇಶದ ರಪ್ತಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಕಂಪೆನಿಯನ್ನು ಇತರ ಕಂಪೆನಿಗಳೊಂದಿಗೆ ಹೋಲಿಸದೇ, ಇದರ ಪೂರ್ವ ಪರ ತಿಳಿಯದೇ ಅಪ ಪ್ರಚಾರ ನಡೆಸಬಾರದು ಮುಂದೆ ಇದು ಮುಂದುವರಿದಲ್ಲಿ  ಸ್ಥಳೀಯರ ಅಭಿ ಪ್ರಾಯ ಪಡೆದು ಅಪ ಪ್ರಚಾರ ನಡೆಸುವ ವರು ಕಾನೂನು ಕ್ರಮವನ್ನು  ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುವುದಾಗಿ ಸಂಸ್ಥೆಯ ಪ್ರತಿನಿಧಿ ಜಗನ್ನಾಥ ಕೋಟ್ಯಾನ್ ತಿಳಿಸಿದ್ದಾರೆ.

"ನಾವು ಐವತ್ತು ವರ್ಷ ಗಳಿಗಿಂತಲೂ ಹೆಚ್ಚು ವರ್ಷದಿಂದ ನಾವು ಈ ಪ್ರದೇಶದಲ್ಲಿ ಇದ್ದೇವೆ. ನಮ್ಮ ಹಿರಿಯರು ಇಲ್ಲಿ ವಾಸ ಮಾಡುತ್ತಿದ್ದಾರೆ. ಈ ಕಂಪೆನಿಯಿಂದ ನಮ್ಮ ಮೀನುಗಾರ ಕುಟುಂಬಕ್ಕೆ ಸಹಾಯವಾಗಿದೆ ಹೊರತು ತೊಂದರೆ ಆಗಿಲ್ಲ. ಹಲವಾರು ಕುಟುಂಬಗಳು ಬದಕಲು ಅವರಿಗೆ ಉದ್ಯೋಗ ನೀಡುವ ಮೂಲಕ ಆಸರೆಯಾಗಿದೆ ಎಂದು ಮೀನುಗಾರ ಮುಖಂಡ ಅನಿಲ್ ಸಾಲ್ಯಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಢಿಯಲ್ಲಿ ಸ್ಥಳೀಯ ಮೀನುಗಾರ ಮುಖಂಡರಾದ ಪ್ರಶಾಂತ ಸಾಲ್ಯಾನ್, ವಿಠಲ ಶ್ರೀಯಾನ್, ಅನಿಲ್ ಸಾಲ್ಯಾನ್, ಕಿಶೋರ್, ಪ್ರೇಮನಾಥ ಸಾಲ್ಯಾನ್, ಮುಕ್ಕ ಸೀ ಫುಡ್ ಕಂಪೆನಿಯ ಪ್ರತಿನಿಧಿ ಜಗನ್ನಾಥ ಕೋಟ್ಯಾನ್ ಸುಮನ್ ಮೊದಲಾವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News