ಎರಡೂ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ- ಪುರುಷೋತ್ತಮ ಪೂಜಾರಿ

Update: 2021-01-16 15:52 GMT

ಬಂಟ್ವಾಳ, ಜ.16: ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಪ್ರಕರಣದ ದಾರಿ ತಪ್ಪಿಸಲು ಮತ್ತು ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಲು ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ಎಂಬವರು ವಕೀಲರ ಸಂಘವನ್ನು ದುರುಪಯೋಗ ಮಾಡುತ್ತಿರುವುದು ಖಂಡನೀಯ ಎಂದು ಮಣಿನಾಲ್ಕೂರು ಬಿಲ್ಲವ ಸಂಘದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಹೇಳಿದರು. 

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 9ರಂದು ಸಂಜೆ ಮಣಿಹಳ್ಳದಿಂದ ಅಜಿಲಮೊಗರು ಮಾರ್ಗವಾಗಿ ತೆರಳುತ್ತಿದ್ದ ಮಣಿನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯ ಅಭಿಷೇಕ್ ಸುವರ್ಣ ಅವರ ಕಾರಿಗೆ ರಾಜೇಶ್ ಪೂಜಾರಿ ತನ್ನ ಕಾರನ್ನು ಅಡ್ಡ ಇಡುತ್ತಾ ದಾರಿ ಬಿಟ್ಟುಕೊಡದೆ ಸುಮಾರು 13 ಕಿಲೋ ಮೀಟರ್ ವರೆಗೆ ಸತಾಯಿಸಿದ್ದಾರೆ. ಇದರ ಸಂಪೂರ್ಣ ವಿಡಿಯೋ ನಮ್ಮಲ್ಲಿ ಇದೆ ಎಂದರು. 

ಜ.10ರಂದು ಮಧ್ಯಾಹ್ನ ಅಲ್ಲಿಪಾದೆ ಎಂಬಲ್ಲಿ ಲಿಂಗಪ್ಪ ಮತ್ತು ಗಿರೀಶ್ ಎಂಬವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ರಾಜೇಶ್ ಪೂಜಾರಿ ಮತ್ತು ಅವರ ತಂದೆ ನಾರಾಯಣ ಪೂಜಾರಿ ತಡೆದು ನಿಲ್ಲಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದನ್ನು ಅರಿತ ರಾಜೇಶ್ ಪೂಜಾರಿ ಪ್ರತಿಯಾಗಿ ಗ್ರಾಮದ ಒಂಭತ್ತು ಜನರ ವಿರುದ್ಧ ತನಗೆ ಜೀವ ಬೆದರಿಕೆ ಒಡ್ಡಿರುವುದಾಗಿ ಸುಳ್ಳು ದೂರು ನೀಡಿದ್ದಾರೆ ಎಂದು ಅವರು ಆರೋಪಿಸಿದರು. 

ನಮಗೆ ವಕೀಲರು ಮತ್ತು ವಕೀಲರ ಸಂಘದ ಮೇಲೆ ಗೌರವ ಇದೆ. ಅದೇ ರೀತಿ ನಮಗೆ ಪೊಲೀಸ್ ಇಲಾಖೆಯ ಮೇಲೂ ಭರವಸೆ ಇದ್ದು ಪ್ರಸಕ್ತ ದಾಖಲಾಗಿರುವ ಎರಡೂ ಪ್ರಕರಣವನ್ನು ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಅಗ್ರಹಿಸಿದರು. 

ಬಿಲ್ಲವ ಸಂಘದ ಸದಸ್ಯ ಅಭಿಷೇಕ್ ಸುವರ್ಣ ಮಾತನಾಡಿ, ನೇಲ್ಯಪಲ್ಕೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಮೈದಾನದಲ್ಲಿ ಸಾರ್ವಜನಿಕರಿಗೆ ಕ್ರೀಡೆ ಸಹಿತ ಇತರ ಧಾರ್ಮಿಕ ಕಾರ್ಯಕ್ರಮ ನಡೆಸಲು ಹಿಂದಿನಿಂದಲೂ ಅವಕಾಶ ಇದೆ. ಆದರೆ ಇತ್ತೀಚೆಗೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ರಾಜೇಶ್ ಪೂಜಾರಿ ಅಡ್ಡಿಪಡಿಸುತ್ತಿದ್ದು ಇದನ್ನು ಪ್ರಶ್ನಿಸಿದ ಬಿಲ್ಲವ ಸಂಘದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕೂಡಾ ಈ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಸಮಾಜ ಸೇವೆಯಲ್ಲಿ ತೊಡಗಿರುವ ಪುರುಷೋತ್ತಮ ಪೂಜಾರಿ ಅವರಿಗೆ ಗ್ರಾಮದಲ್ಲಿ ಜನಮನ್ನಣೆ ಇದ್ದು ಇದನ್ನು ಸಹಿಸದ ರಾಜೇಶ್ ಪೂಜಾರಿ, ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಪುರುಷೋತ್ತಮ ಪೂಜಾರಿ ವಿರುದ್ಧ ರಾಜೇಶ್ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರೆದಿ ದ್ದಾರೆ. ಅವರ ಈ ದುರ್ನಡೆತೆಯ ಬಗ್ಗೆ ಈ ಹಿಂದೆಯೂ ಪೊಲೀಸರ ಗಮನಕ್ಕೆ ನೀಡಿದ್ದೆವು ಎಂದು ಅವರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಲಿಂಗಪ್ಪ, ಪ್ರಕಾಶ್ ಅಂಚನ್, ಶಾಂತಪ್ಪ ಪೂಜಾರಿ ಹಟತಡ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News