ಕಾಪು ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಡಾ. ಭರತ್‍ಕುಮಾರ್ ಪೊಲಿಪು

Update: 2021-01-16 17:40 GMT

ಪಡುಬಿದ್ರಿ : ಪಡುಬಿದ್ರೆ ಶ್ರೀಮಹಾಲಿಂಗೇಶ್ವರ, ಶ್ರೀಮಹಾಗಣಪತಿ ದೇವಳದ ಪ್ರಾಂಗಣದಲ್ಲಿ ಜ. 29 ರಂದು ನಡೆಯಲಿರುವ ಕಾಪು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ರಂಗಕರ್ಮಿ, ಲೇಖಕ ಡಾ.ಭರತ್‍ಕುಮಾರ್ ಪೊಲಿಪು ಆಯ್ಕೆಯಾಗಿದ್ದಾರೆ.

ಮೂಲತ: ಕಾಪು ತಾಲೂಕಿನ ಪೊಲಿಪುನವರಾಗಿರುವ ಭರತ್ ಕುಮಾರ್, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪೊಲಿಪು ಫಿಶರೀಸ್ ಶಾಲೆ, ಪದವಿ ಪೂರ್ವ ಶಿಕ್ಷಣ ಎಸ್‍ವಿಎಸ್ ಕಟಪಾಡಿ ಹಾಗೂ  ಪದವಿ ಶಿಕ್ಷಣವನ್ನು ಉಡುಪಿ ಪಿಪಿಸಿಯಲ್ಲಿ ಪೂರೈಸಿದ್ದಾರೆ. ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಪದವಿ ಹಾಗೂ "ಮುಂಬೈ ಕನ್ನಡ  ರಂಗಭೂಮಿ -ಒಂದು ಸಾಂಸ್ಕೃತಿಕ ಅಧ್ಯಯನ" ಎಂಬ ವಿಷಯದಲ್ಲಿ  ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ಕಳೆದ 30ವರ್ಷಗಳಿಂದ  ಮುಂಬೈ ರಂಗಭೂಮಿಯಲ್ಲಿ ಸೃಜನಶೀಲ ನಿರ್ದೇಶಕರಾಗಿ, ವಸ್ತುನಿಷ್ಠ ನಾಟಕ ವಿಮರ್ಶಕರಾಗಿ, ಅನೇಕ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ, ರಂಗಭೂಮಿಯ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ, ಕರ್ನಾಟಕ ಸಂಘ ಮುಂಬೈ ಮೂಲಕ ರಂಗಭೂಮಿ, ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕøತಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡಿದ್ದಾರೆ.  

ಕಳೆದ ಮೂರು ದಶಕಗಳಿಂದ ಮುಂಬೈಯಲ್ಲಿ ಕ್ರಿಯಾಶೀಲರಾಗಿರುವ ಅವರು  ಈಗಾಗಲೇ  ರಾವಿ ನದಿ ದಂಡೆಯಲ್ಲಿ,  ಆಷಾಢದ ಒಂದು ದಿನ, ನೀಮಾಯೆಯೊಳಗೋ, ಪೋಲಿಸರಿದ್ದಾರೆ ಎಚ್ಚರಿಕೆ, ಗುಮ್ಮನೆಲ್ಲಿಹನೇ ತೋರಮ್ಮ, ಬದುಕು ಮನ್ನಿಸು ಪ್ರಭುವೇ,  ಸಾಯೋ ಆಟ, ಯಾವ ನದಿ ಯಾವ ಪಾತ್ರ, ಗಿಡಗಳ ಜೊತೆ ಮಾತನಾಡೋ ಹುಡುಗ, ಶಾಕುಂತಲಾ, ಅಂಬೆ, ಇನ್ನೊಬ್ಬ ದ್ರೋಣಾಚಾರ್ಯ, ಮೃಗತೃಷ್ಣ, ಕೋಮಲ ಗಾಂಧಾರ ಮೊದಲಾದ ನಾಟಕಗಳನ್ನು  ನಿರ್ದೇಶಿಸಿ ಖ್ಯಾತರಾಗಿದ್ದಾರೆ.  ತುಳುಕೂಟ ಉಡುಪಿ ಆಯೋಜಿಸಿದ ದಿ.ಕೆಮ್ತೂರು ಸ್ಮಾರಕ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ  ಇವರ ನೇತೃತ್ವದ ಕರ್ನಾಟಕ ಸಂಘ ಮುಂಬಯಿ ಇದರ ಕಲಾ ಭಾರತಿ ತಂಡ, ಸತತ ಆರು ಬಾರಿ ಭಾಗವಹಿಸಿ ಮೂರು ಬಾರಿ ಪ್ರಥಮ, ಎರಡು ಬಾರಿ ದ್ವಿತೀಯ ಪ್ರಶಸ್ತಿ ಗಳಿಸಿದೆ. 

ಅವರ "ರಾವಿ ನದಿ ದಂಡೆಯಲ್ಲಿ"ನಾಟಕವು ದೆಹಲಿಯಲ್ಲಿ ರಂಗಗಂಗೋತ್ರಿ ಆಯೋಜಿಸಿದ ನಾಟಕ ಸ್ಫರ್ಧೆಯಲ್ಲಿ  "ಅತ್ಯುತ್ತಮ ಪ್ರಯೋಗಾತ್ಮಕ ನಾಟಕ" ಎಂಬ ಪ್ರಶಸ್ತಿ ಪಡೆದಿದೆ. ಸಮಾಜಸೇವೆ, ಸಂಘಟನೆ, ರಂಗ ನಿರ್ದೇಶನವನ್ನು ಹವ್ಯಾಸವಾಗಿ ಬೆಳೆಸಿಕೊಂಡಿರುವ  ಇವರು ಮುಂಬೈ ಮೊಗವೀರ ಬ್ಯಾಂಕ್‍ನಲ್ಲಿ 35ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News