ಜ. 19: ಹೆಜಮಾಡಿ ಸರ್ವಋತು ಬಂದರಿಗೆ ಮುಖ್ಯಮಂತ್ರಿಯಿಂದ ಶಿಲಾನ್ಯಾಸ

Update: 2021-01-16 17:44 GMT

ಪಡುಬಿದ್ರಿ : ಪರಿಸರದ ಮೀನುಗಾರರ 45 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ 180.8ಕೋಟಿ ರೂ. ಗಳ ಯೋಜನೆ, ಹೆಜಮಾಡಿಯ ಸರ್ವಋತು ಮೀನುಗಾರಿಕಾ ಬಂದರು ಕಾಮಗಾರಿಗೆ ಜನವರಿ 19ರಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಶಿಲಾನ್ಯಾಸಗೈಯ್ಯಲಿರುವರು.

ಮೀನುಗಾರಿಕಾ ಇಲಾಖೆಗೆ ಸೇರಿರುವ ಸುಮಾರು 70ಎಕ್ರೆ ಜಾಗದಲ್ಲಿನ ಭೂಮಿಯಲ್ಲಿ ಮೀನುಗಾರಿಕಾ ಬಂದರಿಗಾಗಿ ಸುಸಜ್ಜಿತ ಮೀನುಗಾರಿಕಾ ಜಟ್ಟಿ, ಬ್ರೇಕ್‍ವಾಟರ್ ಸೌಲಭ್ಯ, ಬೋಟ್ ರಿಪೇರಿ ಶೆಡ್, ಹರಾಜು ಮಳಿಗೆ, ವರ್ಕ್‍ಮೆನ್ ಶೆಡ್, ಕಚೇರಿಗಳು, ಶೌಚಾಲಯ, ಕ್ಯಾಟರಿಂಗ್ ಸೌಲಭ್ಯಗಳೊಂದಿಗೆ ಹೆಜಮಾಡಿ ಬಂದರಿನ ನಿರ್ಮಾಣವಾಗಲಿದೆ. 

ಚೆನ್ನೈನ ಶ್ರೀಪತಿ ಎಸೋಸಿಯೇಟ್ಸ್ ಕಂಪೆನಿಯು ಟೆಂಡರ್ ಮೂಲಕವಾಗಿ ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಕಾರ್ಯ ಗತಗೊಳಿಸಲಿದೆ ಎಂದು ಬಂದರು ಹಾಗೂ ಮೀನುಗಾರಿಕಾ ಇಲಾಖಾ ಸಹಾಯಕ ಕಾರ್ಯಪಾಲಕ ಎಂಜೀನಿಯರ್ ಉದಯ ಕುಮಾರ್ ತಿಳಿಸಿದ್ದಾರೆ.

ಮಂಗಳೂರು, ಉಡುಪಿ ಭಾಗದ ಮೀನುಗಾರರು ತಮ್ಮ ಕಾಯಕದ ನಡುವೆ ಸಮುದ್ರದಲ್ಲಿ ಹಂಚಿ ಹೋಗಿರುವ ವೇಳೆ ಮಳೆಗಾಲದ ವಿಪರೀತ ಮಳೆ, ಸುಂಟರಗಾಳಿ, ಪ್ರಕ್ಷುಬ್ದ ವಾತಾವರಣದಲ್ಲಿ ದಡ ಸೇರಲು ಮಲ್ಪೆ ಅಥವಾ ಮಂಗಳೂರು ಮೀನುಗಾರಿಕಾ ಬಂದರಿಗೇ ಧಾವಿಸಬೇಕಿತ್ತು. ಈ ಬಗ್ಗೆ ಇಲ್ಲಿನ ಮೀನುಗಾರರು ಹೋರಾಟ ಹಾಗೂ ಪ್ರಯತ್ನದಿಂದ 99ಕೋಟಿ ರೂ. ಗಳ ಮೀನುಗಾರಿಕಾ ಜಟ್ಟಿ ಹೆಜಮಾಡಿ ಕೋಡಿಯಲ್ಲಿ ನಿರ್ಮಾಣಗೊಂಡು ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಲೋಕಾರ್ಪಣೆಗೊಂಡಿತ್ತು. ಮುಂದೆ ಇಲ್ಲಿ ಹೂಳಿನ ಸಮಸ್ಯೆ ಅಧಿಕವಾಗಿ ಬೋಟುಗಳ ಒಳ, ಹೊರ ಸಂಚಾರಕ್ಕೆ ತೀರಾ ಅಡಚಣೆಗಳಾಗಿ ಮೀನುಗಾರಿಕೆಗೆ ತೊಂದರೆ ಉಂಟಾಗಿತ್ತು. ಬಳಿಕ ಇಲ್ಲಿನ ಮೀನುಗಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು.

ಪರಿಶೀಲನೆ: ಕಾಪು ಶಾಸಕ ಲಾಲಾಜಿ ಮೆಂಡನ್ ನೇತೃತ್ವದಲ್ಲಿ ಬಂದರು ಹಾಗೂ ಮೀನುಗಾರಿಕಾ ಇಲಾಖೆಯ ವಿವಿಧ ಅಧಿಕಾರಿ ಗಳು ಹೆಜಮಾಡಿ ಕೋಡಿಗೆ ಭೇಟಿಯಿತ್ತು ಶಿಲಾನ್ಯಾಸಕ್ಕಾಗಿ ಸ್ಥಳ ಪರಿಶೀಲನೆಯನ್ನು ಶನಿವಾರ ನಡೆಸಿತು. ಹೆಜಮಾಡಿ ಹಾಗೂ ಪರಿಸರದ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

ಬಂದರು ಹಾಗೂ ಮೀನುಗಾರಿಕಾ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ಲಾಲಾಜಿ ಮೆಂಡನ್ ಸಹಿತ ಜಿಲ್ಲೆಯ ಶಾಸಕರು ಈ ಸಮಾರಂಭದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News