ಕೋವಿಡ್ ಲಸಿಕೆ ಪಡೆದು ಪ್ರಜ್ಞೆ ಕಳೆದುಕೊಂಡ ನರ್ಸ್

Update: 2021-01-17 04:09 GMT

ಕೊಲ್ಕತ್ತಾ : ಕೋವಿಡ್-19 ಲಸಿಕೆ ಪಡೆದ ಕೆಲ ನಿಮಿಷಗಳಲ್ಲೇ ಪ್ರಜ್ಞೆ ಕಳೆದುಕೊಂಡ 35 ವರ್ಷ ವಯಸ್ಸಿನ ನರ್ಸ್ ಒಬ್ಬರನ್ನು ಇಲ್ಲಿನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ದಿನ ಲಸಿಕೆ ಪಡೆದ 15,707 ಮಂದಿಯ ಪೈಕಿ ಅವರು ಕೂಡಾ ಒಬ್ಬರಾಗಿದ್ದರು. ಇತರ 13 ಮಂದಿಯಲ್ಲಿ ಕೂಡಾ ಲಸಿಕೆ ಪಡೆದ ಬಳಿಕ  'ಎಇಎಫ್‌ಐ' ಲಕ್ಷಣ ಕಾಣಿಸಿಕೊಂಡಿದ್ದರೂ, ಇವು ಗಂಭೀರ ಸ್ವರೂಪದ್ದಲ್ಲ ಎಂದು ಹೇಳಲಾಗಿದೆ. ಲಸಿಕೆ ಪಡೆದ ಬಳಿಕ ಎಇಎಫ್‌ಐ ಸಮಸ್ಯೆ ಕಾಣಿಸಿಕೊಂಡರೂ ಇದಕ್ಕೂ ಲಸಿಕೆ ಪ್ರಕ್ರಿಯೆಗೂ ಸಂಬಂಧ ಇಲ್ಲ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಡಾ.ಬಿ.ಸಿ.ರಾಯ್ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ತಕ್ಷಣ ನರ್ಸ್‌ಗೆ ನಡುಕ, ಸುಸ್ತು ಮತ್ತು ಇರಿಸುಮುರಿಸು ಉಂಟಾಯಿತು. ತಕ್ಷಣ ಅವರನ್ನು ಪಕ್ಕದ ನೀಲ್ ರತನ್ ಸರ್ಕಾರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕೃತ ಮೂಲಗಳು ಹೇಳಿವೆ.

"ಬಹುಶಃ ಅದು ಅಲರ್ಜಿಕ್ ಪರಿಣಾಮ ಇರಬೇಕು. ಹಲವು ಲಸಿಕಾ ಕಾರ್ಯಕ್ರಮಗಳಲ್ಲಿ ಇಂಥ ಅಲರ್ಜಿ ಪರಿಣಾಮ ಕಂಡುಬರುತ್ತದೆ. ಇದರಿಂದ ತಕ್ಷಣಕ್ಕೆ ಯಾವುದೇ ಆತಂಕದ ಅಗತ್ಯವಿಲ್ಲ" ಎಣದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ದೆಹಲಿ ವರದಿ: ದೆಹಲಿ ಎಐಐಎಂಎಸ್‌ನಲ್ಲಿ ಶನಿವಾರ ಕೋವಿಡ್ ಲಸಿಕೆ ಪಡೆದ ಭದ್ರತಾ ಸಿಬ್ಬಂದಿಯೊಬ್ಬರಿಗೆ ಕೂಡಾ ತೀವ್ರ ಸ್ವರೂಪದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ.

ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ 20 ವರ್ಷ ಆಸುಪಾಸಿನ ಯುವಕ ಸಂಜೆ 4ರ ವೇಳೆಗೆ ಲಸಿಕೆ ಪಡೆದ ಬಳಿಕ ಎದೆಬಡಿತ ಹೆಚ್ಚಿದ್ದು, ಅಲರ್ಜಿಯಿಂದಾಗಿ ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿವೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಐಐಎಂಎಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.

ದೆಹಲಿಯಲ್ಲಿ ಮೊದಲ 8117 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಉದ್ದೇಶಿಸಿದ್ದು, 4319 ಮಂದಿಗೆ ಲಸಿಕೆ ನೀಡಲಾಗಿದೆ. ಒಟ್ಟು 52 ಮಂದಿಯಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿದ್ದು, 51 ಪ್ರಕರಣಗಳು ಗಂಭೀರ ಸ್ವರೂಪದ್ದಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News