ಯುವಜನ ಸಬಲೀಕರಣಕ್ಕಾಗಿ ಯುವ ಸಬಲೀಕರಣ ನಿಗಮ ಅನಿವಾರ್ಯ : ಕೆ.ಟಿ.ತಿಪ್ಪೇಸ್ವಾಮಿ

Update: 2021-01-17 09:01 GMT

ಮಂಗಳೂರು : ರಾಜ್ಯದ ಎರಡು ಕೋಟಿಗೂ ಅಧಿಕ  ಯುವಜನತೆಗಾಗಿ ಸಬಲೀಕರಣ ನಿಗಮ ಸ್ಥಾಪನೆ ಮಾಡುವುದು ಅನಿವಾರ್ಯ. ಏಳು ವರ್ಷಗಳಿಂದ ಈ ಬಗ್ಗೆ ಕರ್ನಾಟಕದ ಹಲವು ಕಡೆ, ಹಲವು ಸಂಘಟನೆಗಳಿಂದ ಒತ್ತಾಯ ನಡೆಯುತ್ತಿದೆ ಎಂದು ಭಾರತ ಸರಕಾರದ ರಾಷ್ಟ್ರೀಯ ಯುವಜನ ಅಭಿವೃದ್ಧಿ ನಿಧಿ ಕಾರ್ಯಕಾರಿಣಿ ಮತ್ತು ಪರಿಷತ್ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ನಗರದ  ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಸಭಾಂಗಣದಲ್ಲಿಂದು ಸಂವಾದ ಯುವ ಸಂಪನ್ಮೂಲ ಕೇಂದ್ರದ ವತಿಯಿಂದ ಹಮ್ಮಿಕೊಂಡ  ಯುವಜನ ಹಕ್ಕಿನ ಮೇಳವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮಕ್ಕಳ ಹಕ್ಕುಗಳ ಘೋಷಣೆಯಾದಂತೆ ಯುವಜನ ಹಕ್ಕುಗಳು ಘೋಷಣೆಯ ಆಗಬೇಕು ಯುವಜನರ ಸಬಲೀಕರಣಕ್ಕಾಗಿ ಯುವಜನರ ಶಿಕ್ಷಣ, ಆರೋಗ್ಯ, ಉದ್ಯೋಗದ ಪ್ರಸ್ತಾವಗಳು ಇರುವ, ಭದ್ರತೆಯ ಭರವಸೆ ನೀಡುವ, ಯುವಕ ಯುವತಿಯರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ  ಹಕ್ಕುಗಳ ನೆಲೆಯ ರಾಜ್ಯ ಮತ್ತು ರಾಷ್ಟ್ರೀಯ ಯುವನೀತಿ ರೂಪಿಸಬೇಕು, ಈಗ ಕೇಂದ್ರವು ತಯಾರಿ ಮಾಡುತ್ತಿರುವ ಯುವನೀತಿಯು ಇಂತಹ ಅಂಶಗಳನ್ನು ಒಳಗೊಂಡಿರಬೇಕು. ಈ ಹಿಂದೆ ಕರ್ನಾಟಕ ರಾಜ್ಯ ಯುವ ನೀತಿ 2012 ರ ಶಿಫಾರಸಿನಂತೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಾಗಿ ಮರು ನಾಮಕರಣಗೊಡಿತು. ಹೆಸರು ಬದಲಾಯಿತು ಆದರೆ ಸಬಲೀಕರಣದ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಪೂರ್ಣ ಪ್ರಮಾಣದ ಯುವಜನ ನೀತಿ ಮರು ಪರಿಷ್ಕರಣಗೊಂಡು ಜಾರಿಯಾಗ ಬೇಕಾಗಿದೆ. ಮುಖ್ಯ ಮಂತ್ರಿ ಯುವ ಜನತೆಗೆ ಬಜೆಟ್  ಮಂಡನೆ ಮಾಡುವ ಭರವಸೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರು ಯುವ ಜನರಿಗಾಗಿ ಪ್ರತ್ಯೇಕ ಗ್ರಾಮ ಸಭೆ ನಡೆಸುವ ಭರವಸೆ ನೀಡಿರುವುದು ಆಶಾದಯಕ ಬೆಳವಣಿಗೆ ಯಾಗಿದೆ ಎಂದು ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಂಚಾಲಕ ದೇವರಾಜ್ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪರಿಸರ, ಆರೋಗ್ಯ ,ಲಿಂಗಸಮಾನತೆ, ಸಾಮಾಜಿಕ ನ್ಯಾಯ, ಸಾಮಾಜಿಕ ಸೌಹಾರ್ದತೆಯ ವಿಚಾರದಲ್ಲಿ ಯುವಜನ ಶಿಕ್ಷಣದಲ್ಲಿ ತೊಡಗಿಸಿಕೊಂಡಿರುವ ಸಂವಾದ ಸಂಸ್ಥೆ ಮತ್ತು ಅದರ ಅಂಗವಾದ ಬದುಕು ಜೀವನೋಪಾಯ ಕಲಿಕಾ ಕೇಂದ್ರ ಹಾಗೂ ಸಂವಾದದ ಒಡನಾಡಿ ಯುವಜನ ಮುಂದಾಳುಗಳ ಸಾಮೂಹಿಕ ಪ್ರಯತ್ನ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಯುವಜನ ಮೇಳಗಳು ವಿಕೇಂದ್ರಿತವಾಗಿ  ನಡೆಯುತ್ತಿದೆ ಎಂದು  ತಿಳಿಸಿದ್ದಾರೆ.

ಸಮಾರಂಭದಲ್ಲಿ ಚಲನ ಚಿತ್ರನಟ, ಕಲಾವಿದ  ಮೋಹನ್ ಶ್ರೇಣಿ, ಮಂಗಳೂರು ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಂಚಾಲಕಿ ಮಂಜುಳಾ ಸ್ವಾಗತಿಸಿದರು. ಇದೇ ಸಂದರ್ಭ ದಲ್ಲಿ ವಿವಿಧ ಕ್ಷೇತ್ರದ ಯುವ ಸಾಧಕರಾದ ಕೊಳಲು ವಾದಕ ವೇಣು ಗೋಪಾಲ ದೇಮುಂಡ, ಸ್ಯಾಕ್ಸೋಪೋನ್ ವಾದಕ ಅಶ್ವಿನಿ, ಮಹಿಳಾ ಆಟೋ ಚಾಲಕಿ ಪೂರ್ಣಿಮಾ, ಪ್ರಾಣಿ ಸಂರಕ್ಷಕ ತೌಸಿಪ್ ಅಹಮ್ಮದ್, ತೆಂಗಿನ ಮರ ಹತ್ತುವ ಶ್ರಮಿಕ ಸಾಧಕ ಸುನಿಲ್ ಕೊರಗ, ಪೇಪರ್ ಸೀಡ್ ಸ್ಥಾಪಕ ನಿತಿನ್ ವಾಸ್, ಆ್ಯಂಟಿ ಪೊಲ್ಯೂಶನ್ ಡ್ರೈವ್ ಸಂಸ್ಥೆ ಯ ನಿರ್ದೇಶಕ ಅಬ್ದುಲ್ ಎ.ರಹ್ಮಾನ್  ಪರವಾಗಿ ವ್ಯವಸ್ಥಾಪಕ ಮುಹಮ್ಮದ್ ಆಸಿಫ್ ರವರನ್ನು ಅತಿಥಿಗಳು ಗೌರವಿಸಿ ಸನ್ಮಾನಿಸಿದರು.

ನಾದ ಮಣಿ ನಾಲ್ಕೂರು, ತರಿಕಿಟ ಕಲಾವಿದರು ಹಾಗೂ ವಿವಿಧ ಸಂವಾದ ಯುವ ಮನ್ನಡೆ ತಂಡದ ಕಲಾವಿದರು ಮೇಳದಲ್ಲಿ ಜಾಗೃತಿ ಹಾಡು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News