ಪೊಲೀಸರ ಎದುರೇ ತ್ರಿಪುರಾ ಕಾಂಗ್ರೆಸ್ ಅಧ್ಯಕ್ಷರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ

Update: 2021-01-17 17:07 GMT

ಅಗರ್ತಲಾ, ಜ.17: ತ್ರಿಪುರಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪಿಜೂಷ್ ಬಿಸ್ವಾಸ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೆಲವು ವ್ಯಕ್ತಿಗಳು ದಾಳಿ ನಡೆಸಿದ್ದು ಬಿಸ್ವಾಸ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರ ಎದುರೇ ಆಡಳಿತರೂಢ ಬಿಜೆಪಿ ಬೆಂಬಲಿಗರು ದಾಳಿ ನಡೆಸಿರುವುದಾಗಿ ಬಿಸ್ವಾಸ್ ಆರೋಪಿಸಿದ್ದಾರೆ.

ರಾಜಧಾನಿ ಅಗರ್ತಲದಿಂದ 20 ಕಿ.ಮೀ ದೂರವಿರುವ ಬಿಶಾಲ್‌ಗಢದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾದ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಕಚೇರಿಯ ಎದುರುಗಡೆ ದಾಳಿ ನಡೆದಿದೆ. ಬಿಜೆಪಿ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ಬಿಸ್ವಾಸ್ ಮಾಧ್ಯಮಗಳಿಗೆ ತಿಳಿಸಿದ್ದು, ಎಫ್‌ಐಆರ್‌ನಲ್ಲಿ ಇದನ್ನು ಉಲ್ಲೇಖಿಸಿರುವುದಾಗಿ ಹೇಳಿದ್ದಾರೆ.

ಘಟನೆಯಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರಿಗೂ ಗಾಯವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಧಾವಿಸಿದ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ ಎಂದು ವರದಿಯಾಗಿದೆ. ಕಾರಿನ ಮುಂದುಗಡೆ ಗಾಜು ಒಡೆದಿರುವ ಮತ್ತು ಕನ್ನಡಿಗೆ ಹಾನಿಯಾಗಿರುವ ದೃಶ್ಯದ ವೀಡಿಯೊ ವೈರಲ್ ಆಗಿದೆ.

 ಕೇಂದ್ರ ಸರಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಶುಕ್ರವಾರ ಬಿಸ್ವಾಸ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ರ್ಯಾಲಿ ನಡೆದಿದ್ದು, ಅಗರ್ತಲದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ಪ್ರತಿಭಟನಾ ಜಾಥಾ ನಡೆಸಲಾಗಿತ್ತು. 2019ರಲ್ಲಿ ತ್ರಿಪುರಾ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಬಿಸ್ವಾಸ್ ಅತ್ಯಂತ ಸಕ್ರಿಯವಾಗಿದ್ದು ರಾಜ್ಯಾದ್ಯಂತ ನಿರಂತರ ಸಂಚರಿಸಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಯಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News