ಖ್ಯಾತ ಸಂಗೀತಗಾರ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ನಿಧನ

Update: 2021-01-17 16:59 GMT

ಮುಂಬೈ, ಜ.17: ಖ್ಯಾತ ಶಾಸ್ತ್ರೀಯ ಸಂಗೀತಕಾರ , ಪದ್ಮವಿಭೂಷಣ ಪುರಸ್ಕೃತ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ (89 ವರ್ಷ) ರವಿವಾರ ಮಧ್ಯಾಹ್ನ ಮುಂಬೈಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ .

ಬಾಂದ್ರದಲ್ಲಿರುವ ಮನೆಯಲ್ಲಿ ರವಿವಾರ ಮಧ್ಯಾಹ್ನ 12:37ಕ್ಕೆ ಮಾವ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸೊಸೆ ನಮೃತಾ ಗುಪ್ತ ಖಾನ್ ಮಾಹಿತಿ ನೀಡಿದ್ದಾರೆ. 2019ರಲ್ಲಿ ಬ್ರೈನ್‌ಸ್ಟ್ರೋಕ್‌ಗೆ ಒಳಗಾಗಿದ್ದ ಖಾನ್ ಅವರ ದೇಹದ ಎಡಭಾಗ ಪಾರ್ಶ್ವವಾಯುವಿಗೆ ತುತ್ತಾಗಿತ್ತು.

1931ರ ಮಾರ್ಚ್ 3ರಂದು ಉತ್ತರಪ್ರದೇಶದ ಬದೌನ್‌ನಲ್ಲಿ ಜನಿಸಿದ ಖಾನ್, 4 ಗಂಡು ಮತ್ತು 3 ಹೆಣ್ಣುಮಕ್ಕಳ ಕುಟುಂಬದಲ್ಲಿ ಹಿರಿಯರಾಗಿದ್ದರು. ಎಳೆಯ ವಯಸ್ಸಿನಿಂದಲೇ ಸಂಗೀತ ಶಿಕ್ಷಣ ಪಡೆದ ಖಾನ್ ತಮ್ಮ 8ನೆಯ ವಯಸ್ಸಿನಲ್ಲೇ ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡಿದ್ದರು. ಹಿಂದುಸ್ತಾನಿ ಸಂಗೀತದ ಸಾಂಪ್ರದಾಯಿಕ ಘರಾನಗಳಾದ ಗ್ವಾಲಿಯರ್ ಹಾಗೂ ಸಹಸ್ವಾನ್ ಘರಾನಾ ಶೈಲಿಯಲ್ಲಿ ಹೆಸರಾಗಿದ್ದರು. ಇವರಿಗೆ 1991ರಲ್ಲಿ ಪದ್ಮಶ್ರೀ, 2003ರಲ್ಲಿ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, 2006ರಲ್ಲಿ ಪದ್ಮಭೂಷಣ, 2018ರಲ್ಲಿ ಪದ್ಮವಿಭೂಷಣ ಪುರಸ್ಕಾರ ಸಂದಿದೆ.

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಟ್ವಿಟರ್‌ನಲ್ಲಿ ಉಸ್ತಾದ್ ಮುಸ್ತಫಾ ಖಾನ್ ಅವರ ಭಾವಚಿತ್ರವನ್ನು ಹಂಚಿಕೊಂಡಿದ್ದು ‘ಮಹಾನ್ ಸಂಗೀತಕಾರ, ಹಲವು ಶಿಷ್ಯರನ್ನು ರೂಪಿಸಿದ ಉಸ್ತಾದ್ ಖಾನ್ ನಮ್ಮನ್ನಗಲಿದ್ದು ಅತೀವ ದುಃಖ ತಂದಿದೆ. ಅವರಿಂದ ಸ್ವಲ್ಪ ಸಂಗೀತ ಕಲಿಯುವ ಅವಕಾಶ ನನಗೂ ಲಭಿಸಿತ್ತು’ ಎಂದು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News