ತಜ್ಞರ ಸಮಿತಿ ರದ್ದುಗೊಳಿಸಿ: ಸುಪ್ರೀಂಕೋರ್ಟ್‌ಗೆ ರೈತರ ಆಗ್ರಹ

Update: 2021-01-17 14:26 GMT

ಹೊಸದಿಲ್ಲಿ, ಜ.17: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸುವ ಕುರಿತು ಸಲಹೆ ನೀಡಲು ಸುಪ್ರೀಂಕೋರ್ಟ್ ನೇಮಿಸಿರುವ ತಜ್ಞರ ಸಮಿತಿಯನ್ನು ರದ್ದುಗೊಳಿಸಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.

ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಯಲ್ಲಿ ಕೃಷಿ ಕಾಯ್ದೆಯ ಬೆಂಬಲಿಗರೇ ಇದ್ದಾರೆ. ಪಕ್ಷಪಾತಿಗಳ ಸಮಿತಿಯನ್ನು ರಚಿಸಿರುವುದು ನೈಸರ್ಗಿಕ ನ್ಯಾಯ ಸಿದ್ಧಾಂತದ  ಉಲ್ಲಂಘನೆಯಾಗಿದ್ದು , ಈ ಸಮಿತಿಯಿಂದ ನ್ಯಾಯಸಮ್ಮತ ನಿರ್ಧಾರ ಪ್ರಕಟವಾಗುವ ನಿರೀಕ್ಷೆಯಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಲೋಕಶಕ್ತಿ ಹೇಳಿದೆ. ಜನವರಿ 26ರಂದು ರೈತ ಸಂಘಟನೆಗಳು ಹಮ್ಮಿಕೊಂಡಿರುವ ದಿಲ್ಲಿಯತ್ತ ಟ್ರ್ಯಾಕ್ಟರ್ ರ್ಯಾಲಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ದಿಲ್ಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ರೈತ ಸಂಘಟನೆಗಳಿಗೆ ಸೂಚಿಸಿತ್ತು. ಶನಿವಾರ ಸಲ್ಲಿಸಿದ್ದ ಉತ್ತರದ ಜೊತೆ ಲಗತ್ತಿಸಿದ ಅಫಿಡವಿಟ್‌ನಲ್ಲಿ ರೈತ ಸಂಘಟನೆಗಳು ಸಮಿತಿ ರದ್ದುಗೊಳಿಸುವಂತೆ ಒತ್ತಾಯಿಸಿವೆ.

 ಕೃಷಿ ಕಾಯ್ದೆಗಳ ಜಾರಿಗೆ ಮಂಗಳವಾರ ತಡೆಯಾಜ್ಞೆ ನೀಡಿದ್ದ ಸುಪ್ರೀಂಕೋರ್ಟ್, ಸರಕಾರದ ಪ್ರತಿನಿಧಿಗಳು ಹಾಗೂ ರೈತರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ನೀಡಲು 4 ಸದಸ್ಯರ ಸಮಿತಿಯನ್ನು ರಚಿಸಿತ್ತು. ಕೃಷಿ ಅರ್ಥಶಾಸ್ತ್ರಜ್ಞರಾದ ಅಶೋಕ್ ಗುಲಾಟಿ ಮತ್ತು ಪ್ರಮೋದ್ ಕುಮಾರ್ ಜೋಷಿ, ಶೇತ್‌ಕಾರಿ ಸಂಘಟನೆಯ ಸದಸ್ಯ ಅನಿಲ್ ಗಣವತ್ ಹಾಗೂ ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಸಮಿತಿಯ ಸದಸ್ಯರಾಗಿದ್ದಾರೆ. ಈ ಮಧ್ಯೆ, ತಾನು ಯಾವತ್ತೂ ರೈತರ ಮತ್ತು ಪಂಜಾಬ್ ಪರ ನಿಲುವು ಹೊಂದಿರುವುದಾಗಿ ಹೇಳಿದ್ದ ಭೂಪಿಂದರ್ ಸಿಂಗ್ ಮಾನ್, ಸಮಿತಿಯ ಸದಸ್ಯತ್ವವನ್ನು ನಿರಾಕರಿಸಿದ್ದರು.

ಸಮಿತಿಯ ಸದಸ್ಯರೆಲ್ಲರೂ ಹಲವು ದಿನಪತ್ರಿಕೆಗಳಲ್ಲಿ ಮತ್ತು ಸಂದರ್ಶನದಲ್ಲಿ ಕೇಂದ್ರ ಸರಕಾರ ರೈತರೊಂದಿಗೆ ಚರ್ಚಿಸದೆ ಅಂಗೀಕರಿಸಿದ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಲೇಖನ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಇವರು ಸುಪ್ರೀಂಕೋರ್ಟ್‌ಗೆ ನಿಷ್ಪಕ್ಷಪಾತ ವರದಿ ಒಪ್ಪಿಸಲು ಹೇಗೆ ಸಾಧ್ಯ? ಎಂದು ರೈತ ಸಂಘಟನೆಗಳು ಪ್ರಶ್ನಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News