ಅವೆುಝಾನ್ ಪ್ರೈಮ್‌ನ ‘ತಾಂಡವ ’ವೆಬ್ ಧಾರಾವಾಹಿಯ ನಿಷೇಧ, ನಿರ್ಮಾಪಕರ ಬಂಧನಕ್ಕೆ ಬಿಜೆಪಿ ನಾಯಕರ ಆಗ್ರಹ

Update: 2021-01-17 14:34 GMT

ಹೊಸದಿಲ್ಲಿ,ಜ.17: ಅಮೆಝಾನ್ ಪ್ರೈಮ್ ವೀಡಿಯೊದಲ್ಲಿ ಶುಕ್ರವಾರವಷ್ಟೇ ಬಿಡುಗಡೆಗೊಂಡಿರುವ,ಸೈಫ್ ಅಲಿಖಾನ್ ಮುಖ್ಯ ಪಾತ್ರದಲ್ಲಿರುವ ‘ತಾಂಡವ ’ ಧಾರಾವಾಹಿಯನ್ನು ನಿಷೇಧಿಸುವಂತೆ ಮತ್ತು ಅದರ ನಿರ್ಮಾತೃಗಳನ್ನು ಬಂಧಿಸುವಂತೆ ಕಪಿಲ್ ಮಿಶ್ರಾ ಮತ್ತು ಸಂಸದ ಮನೋಜ್ ಕೋಟಕ್ ಸೇರಿದಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಧಾರಾವಾಹಿಯು ಹಿಂದುಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಮತ್ತು ದಲಿತ ವಿರೋಧಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಿರ್ದಯಿ ಮತ್ತು ಮಹತ್ವಾಕಾಂಕ್ಷಿ ರಾಜಕೀಯ ನಾಯಕನ ಸುತ್ತ ಹೆಣೆಯಲಾಗಿರುವ ಧಾರಾವಾಹಿಯು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ರೈತರ ಪ್ರತಿಭಟನೆಯಂತಹ ಕೆಲವು ಸಮಕಾಲೀನ ಪ್ರತಿಭಟನಾ ಆಂದೋಲನಗಳನ್ನು ಪ್ರಚೋದಿಸುತ್ತಿರುವಂತಿದೆ. ಡಿಂಪಲ್ ಕಪಾಡಿಯಾ,ತಿಗ್ಮಾಂಶು ಧುಲಿಯಾ ಮತ್ತು ಮುಹಮ್ಮದ್ ಝೀಶಾನ್ ಅಯ್ಯೂಬ್ ಅವರೂ ಧಾರಾವಾಹಿಯ ತಾರಾಗಣದಲ್ಲಿದ್ದಾರೆ.

 ಧಾರಾವಾಹಿಯ ಹೆಸರು ಶಿವನ ತಾಂಡವ ನೃತ್ಯವನ್ನು ಸೂಚಿಸುತ್ತಿದೆ. ಮೊದಲ ಎಪಿಸೋಡ್‌ನಲ್ಲಿಯ ಕಾಲೇಜು ನಾಟಕದಲ್ಲಿ ಶಿವ ಮತ್ತು ನಾರದರ ನಡುವಿನ ಸಂಭಾಷಣೆಯ ದೃಶ್ಯವು ಬಿಜೆಪಿ ನಾಯಕರ ಆಕ್ಷೇಪಕ್ಕೆ ಗುರಿಯಾಗಿದೆ. ಪ್ರಧಾನಿ ಪಾತ್ರವನ್ನು ವಹಿಸಿರುವ ಧುಲಿಯಾ ದಲಿತ ರಾಜಕಾರಣಿ (ಅನೂಪ್ ಸೋನಿ)ಯನ್ನು ಜಾತಿಯ ಹೆಸರಿನಲ್ಲಿ ಅವಮಾನಿಸಿರುವ ಇನ್ನೊಂದು ದೃಶ್ಯದ ಬಗ್ಗೆಯೂ ಈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಲನಚಿತ್ರಗಳು ಪ್ರದರ್ಶನಗೊಳ್ಳುವ ಮೊದಲು ಸೆನ್ಸಾರ್ ಮಂಡಳಿಯ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ ಅಮೆಝಾನ್ ಪ್ರೈಮ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ತಮ್ಮ ಕಂಟೆಂಟ್‌ಗಳಿಗೆ ಯಾವುದೇ ಅನುಮತಿಯ ಅಗತ್ಯವಿಲ್ಲ. ಹೀಗಾಗಿ ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆಯೂ ಬಿಜೆಪಿ ನಾಯಕರು ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಆಗ್ರಹಿಸಿದ್ದಾರೆ.

 ಸರಕಾರವು ಕಳೆದ ವರ್ಷ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಈ ಸಚಿವಾಲಯದ ವ್ಯಾಪ್ತಿಗೊಳಪಡಿಸಿತ್ತು.

ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸುವಂತೆ ತಾನು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಕೋರಿದ್ದೇನೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಮುಂಬೈನ ಬಿಜೆಪಿ ಸಂಸದ ಕೋಟಕ್,ತಾಂಡವ ಧಾರಾವಾಹಿ ಹಿಂದುಗಳ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಮತ್ತು ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ ಎಂದು ಹೇಳಿದರು.

ಪ್ರತಿ ಸಲವೂ ಹಿಂದು ದೇವತೆಗಳನ್ನು ಹೀನಾಯವಾಗಿ ಬಿಂಬಿಸುವ ಕುತಂತ್ರಗಳು ನಡೆಯುತ್ತಿವೆ,ಆದರೆ ಒಟಿಟಿಗಳನ್ನು ನಿಯಂತ್ರಿಸುವ ಯಾವುದೇ ಏಜೆನ್ಸಿಯ ಅನುಪಸ್ಥಿತಿಯಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಒಟಿಟಿಗಳು ಜಾಗತಿಕ ವೇದಿಕೆಗಳಾಗಿವೆ ಮತ್ತು ಹಿಂದು ದೇವತೆಗಳನ್ನು ಅವಮಾನಿಸುವುದು ಫ್ಯಾಷನ್ ಆಗಿಬಿಟ್ಟಿದೆ. ಅವರು ಇತರ ಧರ್ಮಗಳ ದೇವರುಗಳನ್ನೂ ಇದೇ ರೀತಿಯಲ್ಲಿ ಬಿಂಬಿಸುತ್ತಾರೆಯೇ ಎಂದು ಕೋಟಕ್ ಪ್ರಶ್ನಿಸಿದರು.

ಧಾರಾವಾಹಿಯು ದಲಿತ ವಿರೋಧಿಯಾಗಿದೆ ಮತ್ತು ಹಿಂದುಗಳ ವಿರುದ್ಧ ದ್ವೇಷದಿಂದ ಕೂಡಿದೆ ಎಂದು ದಿಲ್ಲಿಯ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News