ಉಡುಪಿ: ರವಿವಾರ 40 ಮಂದಿಗೆ ಕೊರೋನ ಲಸಿಕೆ

Update: 2021-01-17 14:35 GMT

ಉಡುಪಿ, ಜ.17: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ ಕೇಂದ್ರದಲ್ಲಿ ರವಿವಾರ 40 ಮಂದಿಗೆ ಕೊರೋನ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆಯನ್ನು ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರು ಕೇಂದ್ರಗಳಲ್ಲಿ ನಿಗದಿತ ಗುರಿಯಾದ 538 ಮಂದಿಯಲ್ಲಿ ಈವರೆಗೆ ಒಟ್ಟು 326 ಮಂದಿಗೆ ಕೊರೋನ ಲಸಿಕೆ ನೀಡಲಾಗಿದೆ. ಲಸಿಕೆ ನೀಡುವ ಮೊದಲ ದಿನವಾದ ನಿನ್ನೆ 286 ಮಂದಿ ಲಸಿಕೆಯನ್ನು ಪಡೆದು ಕೊಂಡಿದ್ದರು ಎಂದು ಅವರು ವಿವರಿಸಿದರು.

ಸೋಮವಾರ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ 100 ಮಂದಿಗೆ ಲಸಿಕೆಯನ್ನು ನೀಡುವ ಗುರಿಯನ್ನು ಹಾಕಿ ಕೊಳ್ಳಲಾಗಿದೆ. ಸಾಫ್ಟ್‌ವೇರ್‌ನಲ್ಲಿ ಕೆಲವು ಸಮಸ್ಯೆಗಳು ಕಂಡುಬಂದಿರುವುದರಿಂದ ಅವರಲ್ಲಿ ಎಷ್ಟು ಮಂದಿ ನಾಳೆ ಲಸಿಕೆ ಪಡೆಯಲು ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಈವರೆಗೆ ಲಸಿಕೆ ಪಡೆದವರಲ್ಲಿ ಯಾರಲ್ಲಾದರೂ ಅಡ್ಡಪರಿಣಾಮ ಕಂಡು ಬಂದಿದೆಯೇ ಎಂದು ಪ್ರಶ್ನಿಸಿದಾಗ, ಡಾ.ಟಿಎಂಎ ಪೈ ಆಸ್ಪತ್ರೆ ಹಾಗೂ ಉಡುಪಿ ನಗರ ಪ್ರಾಥಮಿಕ ಕೇಂದ್ರದ ತಲಾ ಒಬ್ಬರಿಗೆ ಹೊಟ್ಟೆನೋವು ಕಂಡುಬಂದಿದ್ದು, ಚಿಕಿತ್ಸೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಯಾರಾದರೂ ಲಸಿಕೆ ಪಡೆಯಲು ನಿರಾಕರಿಸಿದ್ದಾರಾ ಎಂದು ಅವರನ್ನು ಪ್ರಶ್ನಿಸಿದಾಗ, ಯಾರೂ ನೇರವಾಗಿ ನಿರಾಕರಿಸಿಲ್ಲ, ಸಾಫ್ಟವೇರ್ ಸಮಸ್ಯೆಯಿಂದ ಕೆಲವರಿಗೆ ಮಾಹಿತಿಗಳು ಹೋಗಿಲ್ಲ ಎಂದು  ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News