ಪೊಲೀಸರಿಂದ ಕಿರುಕುಳ, ಕಣ್ಗಾವಲು:ಪ್ರತಿಭಟನಾನಿರತ ರೈತರ ಆರೋಪ

Update: 2021-01-17 16:13 GMT

ಘಾಝಿಪುರ,ಜ.17: ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ತಾವು ಭಾಗಿಯಾಗುವುದನ್ನು ತಡೆಯಲು ಪೊಲೀಸರು ಬೆದರಿಕೆಯೊಡ್ಡುತ್ತಿದ್ದಾರೆ,ಕಿರುಕುಳಗಳನ್ನು ನೀಡುತ್ತಿದ್ದಾರೆ ಮತ್ತು ತಮ್ಮ ಮೇಲೆ ಕಣ್ಗಾವಲು ಇರಿಸಿದ್ದಾರೆ ಎಂದು ದಿಲ್ಲಿಯ ಘಾಝಿಪುರ ಗಡಿಯಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿರುವ ಉತ್ತರ ಪ್ರದೇಶದ ರೈತರು ಆರೋಪಿಸಿದ್ದಾರೆ.

ದಿಲ್ಲಿಗೆ ಸಾಗುವ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಪೊಲೀಸರು ತಡೆಗಳನ್ನು ನಿರ್ಮಿಸುತ್ತಿರುವುದರಿಂದ ತಾವು ಸುತ್ತುಬಳಸಿನ ಮತ್ತು ದೂರದ ಮಾರ್ಗಗಳ ಮೂಲಕ ಸಾಗುವಂತಾಗಿದೆ ಎಂದೂ ಈ ರೈತರು ಆರೋಪಿಸಿದ್ದಾರೆ.

‘ನಾವು ಪ್ರತಿಭಟನೆಗೆ ತೆರಳುವ ಮುನ್ನವೇ ಗ್ರಾಮಗಳಲ್ಲಿಯ ಪ್ರತಿಯೊಬ್ಬರನ್ನೂ ಕರೆಸಿದ್ದ ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳದಂತೆ ಸೂಚಿಸಿದ್ದರು. ನಮ್ಮ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದರು ’ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರೈತರು ತಿಳಿಸಿದರು.

 ಉತ್ತರ ಪ್ರದೇಶ ಪೊಲೀಸರು ಕೆಲವು ರೈತರನ್ನು ಬಂಧಿಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಮಾಧ್ಯಮ ಉಸ್ತುವಾರಿ ಧಮೇಂದ್ರ ಮಲಿಕ್ ತಿಳಿಸಿದರು.

ಪೊಲೀಸರು ಸ್ಥಳೀಯ ನಾಯಕರ ಮನೆಗಳ ಮುಂದೆ ಮೊಕ್ಕಾಂ ಹೂಡಿದ್ದಾರೆ ಮತ್ತು ಯಾವುದೇ ಸಭೆಗಳನ್ನು ನಡೆಸಲು ಅವರಿಗೆ ಅವಕಾಶ ನೀಡುತ್ತಿಲ್ಲ ಎಂದೂ ಮಲಿಕ್ ಆರೋಪಿಸಿದರು.

ರೈತರ ಆರೋಪಗಳನ್ನು ನಿರಾಕರಿಸಿದ ಉತ್ತರ ಪ್ರದೇಶದ ಎಡಿಜಿಪಿ ಪ್ರಶಾಂತ ಕುಮಾರ್ ಅವರು,ರೈತರನ್ನು ಮಾರ್ಗಮಧ್ಯೆ ನಿಜಕ್ಕೂ ತಡೆಯಲಾಗುತ್ತಿದ್ದರೆ ಎಂಟರಿಂದ ಒಂಭತ್ತು ಸಾವಿರ ರೈತರು ದಿಲ್ಲಿಯನ್ನು ತಲುಪಿದ್ದು ಹೇಗೆ ಮತ್ತು ಈಗಲೂ ಪ್ರತಿಭಟನಾ ಸ್ಥಳಗಳನ್ನು ಸೇರುತ್ತಿರುವುದು ಹೇಗೆ ಎಂದು ಪ್ರಶ್ನಿಸಿದರು.

ರೈತರ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂಬ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ,ಪೊಲೀಸರಿಗೆ ಇಂತಹ ಆದೇಶವೂ ಬಂದಿಲ್ಲ ಎಂದರು.

‘ಪೊಲೀಸರು ನಮ್ಮ ಮನೆಗಳಿಗೂ ಭೇಟಿ ನೀಡುತ್ತಿದ್ದಾರೆ ಮತ್ತು ಕುಟುಂಬ ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ. ನಾವು ದಿಲ್ಲಿಗೆ ಪ್ರಯಾಣಿಸುತ್ತಿದ್ದೇವೆ ಎಂದು ಗೊತ್ತಾದರೆ ನಮ್ಮನ್ನು ಮರಳಿ ಕರೆಸುವಂತೆ ಕುಟುಂಬ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ ’ಎಂದು ಭಾಗಪತ್‌ನ ರೈತರೋರ್ವರು ತಿಳಿಸಿದರು.

 ರೈತರು ದಿಲ್ಲಿಗೆ ಬರುವುದಕ್ಕಿಂತ ಮುನ್ನವೇ ಪೊಲೀಸರು ಪ್ರತಿಭಟನೆಗಳಲ್ಲಿ ಭಾಗಿಯಾಗದಂತೆ ಸ್ಥಳೀಯ ಗುರುದ್ವಾರಾಗಳ ಮೂಲಕ ಎಚ್ಚರಿಕೆ ನೀಡಿದ್ದರು. ಕೆಲವರನ್ನು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಾಜರಾಗುವಂತೆಯೂ ಸೂಚಿಸಲಾಗಿತ್ತು ಎಂದು ಪಿಲಿಭಿತ್‌ನ ರೈತ ಮಲ್ಕೀತ್ ಸಿಂಗ್ ಬೈನ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News