ಕೇಂದ್ರದಿಂದ ದಬ್ಬಾಳಿಕೆಯ ವರ್ತನೆ: ತನಿಖಾ ಸಂಸ್ಥೆಗಳ ಸಮನ್ಸ್‌ಗೆ ರೈತರ ಆಕ್ರೋಶ

Update: 2021-01-17 16:32 GMT

ಹೊಸದಿಲ್ಲಿ, ಜ.17: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಮೂಲಕ ನೋಟಿಸ್ ರವಾನಿಸಿ ಕೇಂದ್ರ ಸರಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಸಾಕ್ಷಿಗಳಾಗಿ ಪರಿಗಣಿಸಿ ಪಂಜಾಬಿ ನಟ ದೀಪು ಸಿಧು ಸೇರಿದಂತೆ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿದವರು ಹಾಗೂ ಪ್ರತಿಭಟನಾ ನಿರತ 40 ಮಂದಿಗೆ ಎನ್‌ಐಎ ಸಮನ್ಸ್ ನೀಡಿದೆ.

ರವಿವಾರ ದಿಲ್ಲಿ ಹೊರವಲಯದ ಸಿಂಘು ಗಡಿಭಾಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ರೈತ ಮುಖಂಡ ಶಿವಕುಮಾರ್ ಕಕ್ಕ, ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವವರಿಗೆ ಕೇಂದ್ರ ಸರಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

ರೈತರ ಅಭಿಯಾನದಲ್ಲಿ ಭಾಗಿಯಾದವರ ಅಥವಾ ಅಭಿಯಾನವನ್ನು ಬೆಂಬಲಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಇದನ್ನು ಎಲ್ಲಾ ರೈತ ಸಂಘಗಳೂ ಖಂಡಿಸಿವೆ. ಇದನ್ನು ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ವಿರೋಧಿಸಲಿದ್ದೇವೆ ಎಂದವರು ಹೇಳಿದ್ದಾರೆ.

ತನಿಖಾ ತಂಡಗಳ ಸಮನ್ಸ್ ಕೇಂದ್ರ ಸರಕಾರ ದುರ್ಬಲಗೊಳ್ಳುತ್ತಿರುವ ಸಂಕೇತವಾಗಿದೆ ಎಂದು ರೈತ ಮುಖಂಡರಾದ ಬಲ್‌ದೇವ್ ಸಿಂಗ್ ಸಿರ್ಸಾ ಮತ್ತು ಮನ್‌ಜೀನ್ ಸಿಂಗ್ ರಾಯ್ ಹೇಳಿದ್ದಾರೆ. ಎನ್‌ಐಎ ಹೆಸರಿನಲ್ಲಿ ಸರಕಾರ ಮಾಡುತ್ತಿರುವ ಕೆಲಸವಿದು. 56 ಇಂಚು ವಿಸ್ತಾರದ ಗುಂಡಿಗೆಯಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸರಕಾರದ ಕೆಲಸವಿದು. ಈಗ ಆ ಗುಂಡಿಗೆ ಮುದುಡಿದೆ. ನಮ್ಮ ಹೋರಾಟದಿಂದಾಗಿ ಸರಕಾರ ದುರ್ಬಲವಾಗಿದೆ. ನಮ್ಮನ್ನು ವಿಭಜಿಸಲು ಸರಕಾರ ನಡೆಸುತ್ತಿರುವ ಪ್ರಯತ್ನ ವಿಫಲವಾಗಿದೆ ಎಂದು ಸಿರ್ಸ ಹೇಳಿದ್ದಾರೆ. ಸಿರ್ಸಗೂ ಎನ್‌ಐಎ ಸಮನ್ಸ್ ಜಾರಿಯಾಗಿದೆ.

ರೈತ ಮುಖಂಡರಿಗೆ ಎನ್‌ಐಎ ಸಮನ್ಸ್ ನೀಡಿರುವುದನ್ನು ಅಕಾಲಿದಳ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಖಂಡಿಸಿದ್ದಾರೆ. ರೈತರು ರಾಷ್ಟ್ರವಿರೋಧಿಗಳಲ್ಲ. ರೈತರನ್ನು ಕಂಗೆಡಿಸಲು ಸರಕಾರ ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಬಾದಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News