ದ.ಕ.ಜಿಲ್ಲೆ : ಜ.18ರಂದು ಕೊರೋನ ಲಸಿಕೆ ಅಭಿಯಾನಕ್ಕೆ ಚಾಲನೆ

Update: 2021-01-17 17:57 GMT

ಮಂಗಳೂರು, ಜ.17: ದ.ಕ.ಜಿಲ್ಲೆಯ ಆರು ಕೇಂದ್ರಗಳ ಸಹಿತ ಜಿಲ್ಲೆಯ ಎಲ್ಲ ಮೆಡಿಕಲ್ ಕಾಲೇಜು, ಐದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ನಿರೋಧಕ ಲಸಿಕೆ ‘ಕೋವಿಸೀಲ್ಡ್’ ಜ.18ರಿಂದ ಪೂರ್ಣ ಪ್ರಮಾಣದಲ್ಲಿ ನೀಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ.

ಶನಿವಾರ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರೂ ಕೂಡ ರವಿವಾರ ರಜಾ ದಿನವಾದ ಕಾರಣ ಜ.18ರಿಂದ ಪೂರ್ಣರೂಪದಲ್ಲಿ ಜಿಲ್ಲೆಯ ಮೆಡಿಕಲ್ ಕಾಲೇಜು ಸೇರಿದಂತೆ ಮಂಗಳೂರು, ಮುಲ್ಕಿ, ಬಂಟ್ವಾಳದ ವಾಮದಪದವು, ವಿಟ್ಲ ಹಾಗೂ ಕಡಬದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಜೇಶ್ ಸಾಮಾನ್ಯವಾಗಿ ಸೋಮವಾರ ಆರೋಗ್ಯ ಕೇಂದ್ರ ಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಲಸಿಕೆ ನೀಡುವ ಕೆಲಸದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಈ ಕಾರಣ ದಿಂದ ಈಗಿರುವ ಆರು ಕೇಂದ್ರಗಳ ಜತೆಗೆ ಜಿಲ್ಲೆಯ ಮೆಡಿಕಲ್ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾ ಗುತ್ತದೆ. ಜ.19ರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಪ್ರಕ್ರಿಯೆ ಸಾಗಲಿದೆ. ಆಯ್ಕೆಯಾದ ಕೇಂದ್ರಗಳಲ್ಲಿ ಪ್ರತಿ ದಿನ 100 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.

ವೆನ್ಲಾಕ್‌ನ ಆಯುಷ್‌ನಲ್ಲಿ 6 ಕಡೆ: ಸುರತ್ಕಲ್ ಮತ್ತು ಕುಳಾಯಿ ಕೇಂದ್ರ ವ್ಯಾಪ್ತಿಯ ಮಂದಿಗೆ ಸುರತ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಿದರೆ ಉಳಿದಂತೆ ತಾಲೂಕಿನ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಮಂದಿಗೆ ವೆನ್ಲಾಕ್‌ನ ಆಯುಷ್ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ. ಆಯುಷ್ ವಿಭಾಗದ ಮೂರು ಮಹಡಿಗಳಲ್ಲಿ 6 ಕೇಂದ್ರ ತೆರೆಯಲಾಗಿದ್ದು, ದಿನಕ್ಕೆ 600 ಮಂದಿಗೆ ನೀಡುವ ವ್ಯವಸ್ಥೆ ಇರಲಿದೆ. ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡ ಲಾನುಭವಿಗಳಿಗೆ ಮಾತ್ರ ನೀಡಲಾಗುತ್ತದೆ. ಈಗಾಗಲೇ ಕೋವಿನ್ ವೆಬ್‌ನಲ್ಲಿ ಸರಕಾರಿ ವ್ಯವಸ್ಥೆಯಲ್ಲಿ 89 ಸಂಸ್ಥೆಗಳಲ್ಲಿ 10,212 ಹಾಗೂ ಖಾಸಗಿ ವ್ಯವಸ್ಥೆಯಲ್ಲಿ 818 ಸಂಸ್ಥೆಗಳಲ್ಲಿ 42,169 ಮಂದಿಯ ಸಹಿತ ಒಟ್ಟು 52,831 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಎರಡನೇ ಬಾರಿ ಲಸಿಕೆ ಮಂಗಳೂರಿಗೆ

ಒಂದು ಸುತ್ತಿನ ಲಸಿಕೆಯ ವಿತರಣೆಯ ಬಳಿಕ ಎರಡನೇ ಸುತ್ತನ ಲಸಿಕೆ ವಿತರಣೆ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಜ.18ರಂದು ಮತ್ತೊಂದು ಸುತ್ತಿನ ಲಸಿಕೆಯೊಂದಿಗೆ ಇಲಾಖೆಯ ವಾಹನ ಮೈಸೂರು ಮೂಲಕ ಮಂಗಳೂರು ಪ್ರವೇಶ ಪಡೆಯಲಿದೆ. ಮಂಗಳೂರು ಪ್ರಾದೇಶಿಕ ಲಸಿಕಾ ಕೇಂದ್ರವಾದ ಕಾರಣದಿಂದ ರಾಜ್ಯದ ಇತರ ಜಿಲ್ಲೆಗೆ ಹೋಲಿಕೆ ಮಾಡಿದರೆ ಲಸಿಕೆಯ ಪ್ರಮಾಣ ಸ್ವಲ್ಪ ಹೆಚ್ಚು ತರುವ ಸಾಧ್ಯತೆಯಿದೆ. ಮೊದಲ ಸುತ್ತಿನಲ್ಲಿ ಮಂಗಳೂರಿಗೆ 42,500 ಲಸಿಕೆಗಳು ಬಂದಿತ್ತು. ಅದರಲ್ಲಿ ದ.ಕ. ಜಿಲ್ಲೆಗೆ 24,500, ಉಡುಪಿಗೆ 12,000, ಚಿಕ್ಕಮಗಳೂರಿಗೆ 6 ಸಾವಿರ ಲಸಿಕೆಯನ್ನು ವಿತರಣೆ ಮಾಡಲಾಗಿತ್ತು. ಈಗ ಬೇಡಿಕೆಯಷ್ಟು ಲಸಿಕೆಯನ್ನು ಪೂರೈಸಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.

ರಜೆಯಲ್ಲೂ ಕರ್ತವ್ಯ ಪ್ರಜ್ಞೆ

ಲಸಿಕೆ ವಿತರಣೆ ಕಾರ್ಯಕ್ರಮ ಪೂರ್ಣ ಪ್ರಮಾಣದಲ್ಲಿ ಸಾಗಲಿರುವ ಕಾರಣದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ರವಿವಾರದ ರಜೆಯನ್ನು ಬದಿಗೊತ್ತಿಕೊಂಡು ಕೋವಿಡ್ ಆ್ಯಪ್‌ನಲ್ಲಿ ಲಸಿಕೆ ಸ್ವೀಕರಿಸುವ ಮಂದಿಗಳ ಹೆಸರನ್ನು ಅಪ್‌ಲೋಡ್ ಮಾಡುವ ಕಾರ್ಯದ ಜತೆಗೆ ಲಸಿಕೆಯ ಶೆಡ್ಯುಲ್ ಕೆಲಸದಲ್ಲಿ ತಲ್ಲೀನರಾಗಿದ್ದರು.

ಜ.20ರಿಂದ ಎರಡನೇ ಸುತ್ತಿನ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ನಗರಾಡಳಿತ ಸೇರಿದಂತೆ 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರ ಹೆಸರು ನೋಂದಣಿ ಮಾಡಲಾಗುತ್ತಿದ್ದು, ಜ.25ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಹೆಸರು ಅಪ್‌ಲೋಡ್‌ಗೆ ಕೊನೆಯ ದಿನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜ. 31ಕ್ಕೆ ಮಕ್ಕಳಿಗೆ ಪಲ್ಸ್ ಪೊಲೀಯೋ ಕಾರ್ಯಕ್ರಮ

ಜ.17ರಂದು ನಡೆಯಬೇಕಿದ್ದ ಪಲ್ಸ್ ಪೊಲೀಯೋ ಕಾರ್ಯಕ್ರಮ ಕೋವಿಡ್ ಲಸಿಕೆಗಾಗಿ ಜ.31ಕ್ಕೆ ಮುಂದೂಡಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪೂರ್ಣ ರೂಪದಲ್ಲಿ ಕೋವಿಡ್ ಲಸಿಕೆ ನೀಡುವ ಕಾಯಕದಲ್ಲಿ ತಲ್ಲೀನರಾಗಿರುವ ಕಾರಣ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಜ.31ರಂದು ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್‌ಒ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News