ಪುಟಿನ್ ವಿರೋಧಿ ನವಾಲ್ನಿ ಮತ್ತೆ ರಶ್ಯಕ್ಕೆ ವಾಪಸ್

Update: 2021-01-17 18:12 GMT

ಮಾಸ್ಕೋ,ಜ.17: ರಶ್ಯದ ಪುಟಿನ್ ಆಡಳಿತದ ಪ್ರಬಲ ಟೀಕಾಕಾರ, ಅಲೆಕ್ಸಿಯ ನವಾಲ್ನಿ ರವಿವಾರ ವಿಮಾನದ ಮೂಲಕ ರಶ್ಯಕ್ಕೆ ವಾಪಸಾಗಿರುವುದು ಭಾರೀ ಕುತೂಹಲ ಸೃಷ್ಟಿಸಿದೆ. ಕಳೆದ ಬೇಸಿಗೆಯಲ್ಲಿ ವಿಷಪ್ರಾಶನಕ್ಕೀಡಾದ ಬಳಿಕ ಚಿಕಿತ್ಸೆಗಾಗಿ ನವಾಲ್ನಿ ಜರ್ಮನಿಗೆ ತೆರಳಿದ್ದರು. ನವಾಲ್ನಿ ವಾಪಾಸಾದಲ್ಲಿ ಅವರನ್ನು ಬಂಧಿಲಾಗುವುದೆಂದು ರಶ್ಯದ ಅಧಿಕಾರಿಗಳು ಈಗಾಗಲೇ ಪ್ರಕಟಿಸಿದ್ದರೂ, ಈ ಪ್ರತಿಪಕ್ಷ ನಾಯಕ ತಾಯ್ನಾಡಿಗೆ ಮರಳುತ್ತಿರುವುದು ಅಲ್ಲಿನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ವ್ಲಾದಿಮಿರ್ ಪುತಿನ್ ಅವರ ಕಟ್ಟಾ ವಿರೋಧಿಯಾದ ನವಾಲ್ನಿ ಅವರಿಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ವಿಷಪ್ರಾಶನವಾದ ಬಳಿಕ ಅವರು ಚಿಕಿತ್ಸೆಗಾಗಿ ಜರ್ಮನಿಯ ಆಸ್ಪತ್ರೆಗೆ ತೆರಳಿದ್ದರು. ನವಾಲ್ನಿ ಅವರಿಗೆ ನೊವಿಚೊಕ್ ನರ್ವ್ ಏಜೆಂಟ್ ಎಂಬ ರಾಸಾಯನಿಕ ವಿಷವನ್ನು ನೀಡಲಾಗಿತ್ತೆಂದು ಜರ್ಮನಿಯ ವೈದ್ಯಕೀಯ ಪರೀಕ್ಷಾ ವರದಿ ಬಹಿರಂಗಪಡಿಸಿತ್ತು.

   ಕಳೆದ ಐದು ತಿಂಗಳುಗಳಲ್ಲಿ ಇದು ನನ್ನ ಅತ್ಯುತ್ತಮ ಕ್ಷಣವಾಗಿದೆ ಎಂದು ಜರ್ಮನ್ ರಾಜಧಾನಿ ಬರ್ಲಿನ್‌ನಲ್ಲಿ ರಶ್ಯದ ವಿಮಾನವೇರಿದ ಸಂದರ್ಭದಲ್ಲಿ ನವಾಲ್ನಿ ಸುದ್ದಿಗಾರರಿಗೆ ತಿಳಿಸಿದರು. ‘‘ನನಗೆ ದೊಡ್ಡದೊಂದು ಅನುಭವವಾಗುತ್ತಿದೆ. ಕೊನೆಗೂ ನಾನು ನನ್ನ ಹುಟ್ಟೂರಿಗೆ ಮರಳುತ್ತಿದ್ದೇನೆ’’ ಎಂದವರು ಹೇಳಿದರು.

2014ರ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ತನಗೆ ವಿಧಿಸಲಾದ ಜೈಲು ಶಿಕ್ಷೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗುವುದೆಂದು ರಶ್ಯದ ಕಾರಾಗೃಹ ಇಲಾಖೆಯು ತಿಳಿಸಿದೆ.

ಆದರೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ನವಾಲ್ನಿ ತಾನು ಮತ್ತೆ ಬಂಧಿತನಾಗುವುನೆಂಬುದಾಗಿ ಭಾವಿಸಲಾರೆ ಎಂದು ಹೇಳಿದ್ದಾರೆ.

‘‘ನಾನು ಯಾಕೆ ಹೆದರಬೇಕು? ನಾನೋರ್ವ ರಶ್ಯದ ಪ್ರಜೆಯಾಗಿದ್ದು ಸ್ವದೇಶಕ್ಕೆ ಮರಳುವ ಎಲ್ಲಾ ಹಕ್ಕನ್ನು ಹೊಂದಿದ್ದೇನೆ ’’ಎಂದವರು ಹೇಳಿದ್ದಾರೆ.

  ನವಾಲ್ನಿ ಜೊತೆಗೆ ಅವರ ಪತ್ನಿ ಯೂಲಿಯಾ ಹಾಗೂ ವಕ್ತಾರೆ ಕೂಡಾ ರಶ್ಯಕ್ಕೆ ಆಗಮಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಸಂಸದೀಯ ಚುನಾವಣೆಗಳಲ್ಲಿ ಗೆಲ್ಲುವ ಆಶಾವಾದ ಹೊಂದಿರುವ ನವಾಲ್ನಿ ವಿರುದ್ಧ ಇತರ ಕೆಲವು ಕ್ರಿಮಿನಲ್ ಪ್ರಕರಣಗಳನ್ನು ಕೂಡಾ ಹೊರಿಸಲಾಗಿದೆ. ಆದರೆ ತನ್ನ ಮೇಲಿನ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತವಾದುದೆಂದು ನವಾಲ್ನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News