ವಲಸಿಗರಿಗೆ ನಿಷೇಧ ಸುಗ್ರೀವಾಜ್ಞೆ ರದ್ದತಿಗೆ ಬೈಡನ್ ನಿರ್ಧಾರ

Update: 2021-01-17 18:22 GMT

ವಾಶಿಂಗ್ಟನ್,ಜ.17: ಜೋ ಬೈಡನ್ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅವರು ಮುಸ್ಲಿಮರು ಬಹುಸಂಖ್ಯಾತರಾಗಿರುವ ಕೆಲವು ರಾಷ್ಟ್ರಗಳ ವಲಸಿಗರಿಗೆ ಅಮೆರಿಕ ಪ್ರವೇಶ ನಿರಾಕರಿಸುವ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಗ್ರೀವಾಜ್ಞೆಯನ್ನು ರದ್ದುಪಡಿಸಲಿದ್ದಾರೆ ಹಾಗೂ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರುಸೇರ್ಪಡೆಗೊಳ್ಳುವ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

 ಅಮೆರಿಕದ 46ನೇ ಅಧ್ಯಕ್ಷರಾಗಿ ಜೊ ಬೈಡನ್ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಗಡಿಗಳಲ್ಲಿ ವಲಸಿಗ ಕುಟುಂಬಗಳಿಂದ ಬೇರ್ಪಟ್ಟ ಮಕ್ಕಳನ್ನು ಅವರ ಪಾಲಕರಿಗೆ ಒಪ್ಪಿಸುವ ನಿರ್ಧಾರವನ್ನು ಕೂಡಾ ನೂತನ ಅಮೆರಿಕ ಅಧ್ಯಕ್ಷರು ಪ್ರಕಟಿಸುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ ಕೋವಿಡ್-19 ನಿಯಂತ್ರಣ ಕುರಿತ ನಿಯಮಾವಳಿಗಳು ಹಾಗೂ ಮಾಸ್ಕ್ ಧಾರಣೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಆದೇಶಗಳನ್ನು ಘೋಷಿಸುವ ಸಾಧ್ಯತೆಯಿದೆ.

ಈ ಮಧ್ಯೆ ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಪ್ಯಾರಿಸ್ ಒಡಂಬಡಿಕೆಗೆ ಅಮೆರಿಕ ಮರುಸೇರ್ಪಡೆಗೊಳ್ಳುವ ನಿರ್ಧಾರವನ್ನು ಅವರು ಘೋಷಿಸುವ ನಿರೀಕ್ಷೆಯಿದೆ. ಈ ಮೊದಲು ಟ್ರಂಪ್ ಆಡಳಿತವು ಪ್ಯಾರಿಸ್ ಒಡಂಬಡಿಕೆಯಿಂದ ಹಿಂದೆ ಸರಿದಿತ್ತು.

ಕೋವಿಡ್-19 ಹಾವಳಿ ಹಾಗೂ ಲಾಕ್‌ಡೌನ್ ಬಳಿಕ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವವರಿಗೆ ಮತ್ತು ಬಿಕ್ಕಟ್ಟಿನಲ್ಲಿ ಸಿಲುಕಿರುವ ಉದ್ಯಮಿಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌ಗಳನ್ನು ಕೂಡಾ ಬೈಡನ್ ಪ್ರಕಟಿಸುವ ಸಾಧ್ಯತೆಯಿದೆಯೆಂದು ಡೆಮಾಕ್ರಾಟಿಕ್ ಪಕ್ಷದ ಮೂಲಗಳು ತಿಳಿಸಿವೆ.

ಉನ್ನತ ಶಿಕ್ಷಣಕ್ಕಾಗಿ ಪಡೆಯಲಾಗುವ ಸಾಲ ಮರುಪಾವತಿಯ ಅವಧಿಯ ವಿಸ್ತರಣೆ, ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವವರಿಗೆ ನೆರವು ನೀಡುವ ಕ್ರಮಗಳನ್ನು ಜೋ ಬೈಡನ್ ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News