ಕಾಬೂಲ್: ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಾಧೀಶೆಯರ ಗುಂಡಿಕ್ಕಿ ಹತ್ಯೆ

Update: 2021-01-17 18:27 GMT

ಲಾಸ್‌ ಏಂಜಲೀಸ್,ಜ.17: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ, ಸುಪ್ರೀಂಕೋರ್ಟ್‌ನ ಇಬ್ಬರು ಮಹಿಳಾ ನ್ಯಾಯಾಧೀಶರನ್ನು ಬಂಧೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.

ನ್ಯಾಯಾಲಯಕ್ಕೆ ಸೇರಿದ ವಾಹನದಲ್ಲಿ ಈ ಇಬ್ಬರು ನ್ಯಾಯಾಧೀಶೆಯರು ತಮ್ಮ ಕಚೇರಿಯತ್ತ ಪ್ರಯಾಣಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿರುವುದಾಗಿ ಸುಪ್ರೀಂ ಕೋರ್ಟ್‌ನ ವಕ್ತಾರ ಅಹ್ಮದ್ ಫಾಹಿಮ್ ಖ್ವಾವೀಮ್ ಅವರು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಸರ್ವೋಚ್ಚ ನ್ಯಾಯಾಲಯದಲ್ಲಿ 200ಕ್ಕೂ ಅಧಿಕ ಮಹಿಳಾ ನ್ಯಾಯಾಧೀಶರು ಕೆಲಸ ಮಾಡುತ್ತಿದ್ದಾರೆಂದು ವಕ್ತಾರರು ತಿಳಿಸಿದ್ದಾರೆ.

 ತಾಲಿಬಾನ್ ಹಾಗೂ ಅಫ್ಘಾನ್ ಸರಕಾರದ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ವಿಶೇಷವಾಗಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದಾದ್ಯಂತ ಹಿಂಸಾಚಾರ ಉಲ್ಬಣಿಸಿದೆ. ಭಯೋತ್ಪಾದಕರು ಗಣ್ಯ ವ್ಯಕ್ತಿಗಳನ್ನು ಗುರಿಯಿರಿಸಿ ಹತ್ಯೆಗೈಯುವ ಹೊಸ ಪ್ರವೃತ್ತಿಯಿಂದಾಗಿ ರಾಜಧಾನಿಯಲ್ಲಿ ಭಯದ ವಾತಾವರಣ ಉಂಟಾಗಿದೆ.

ಅಫ್ಘಾನಿಸ್ತಾನದಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು 2,500ಕ್ಕೆ ಇಳಿಸುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗಾನ್ ಘೋಷಿಸಿದ ಕೆಲವೇ ದಿನಗಳ ಬಳಿಕ ಈ ದಾಳಿ ನಡೆದಿದೆ.

ಇತ್ತೀಚಿನ ತಿಂಗಳುಗಳಲ್ಲಿ ಕಾಬೂಲ್ ಮತ್ತಿತರ ನಗರಗಳಲ್ಲಿ ಹಾಡಹಗಲೇ ಭಯೋತ್ಪಾದಕರು ರಾಜಕಾರಣಿಗಳು, ಪತ್ರಕರ್ತರು,ಸಾಮಾಜಿಕ ಹೋರಾಟಗಾರರು, ವೈದ್ಯರು ಮತ್ತು ನ್ಯಾಯವಾದಿಗಳನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

    ಈ ಯೋಜಿತ ದಾಳಿಗಳ ಹಿಂದೆ ತಾಲಿಬಾನ್‌ನ ಕೈವಾಡವಿದೆಯೆಂದು ಅಫ್ಘಾನ್ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ ತಾಲಿಬಾನ್ ಅದನ್ನು ನಿರಾಕರಿಸಿದೆ. ಆದರೆ ಕೆಲವು ಹತ್ಯೆಗಳನ್ನು ತಾನು ನಡೆಸಿರುವುದಾಗಿ ಐಸಿಸ್ ಉಗ್ರಗಾಮಿ ಗುಂಪು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News