ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ‍್ಯಾಲಿಯ ಕುರಿತು ದಿಲ್ಲಿ ಪೊಲೀಸರು ತೀರ್ಮಾನಿಸಲಿ: ಸುಪ್ರೀಂ ಕೋರ್ಟ್

Update: 2021-01-18 07:13 GMT

ಹೊಸದಿಲ್ಲಿ,ಜ.18: ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿ ದಿಲ್ಲಿಗೆ ಪ್ರತಿಭಟನಾನಿರತ ರೈತರು ಟ್ರ್ಯಾಕ್ಟರ್ ರ‍್ಯಾಲಿಯನ್ನು ಆಯೋಜಿಸಿದ್ದು, ಈ ಕುರಿತಾದಂತೆ ದಿಲ್ಲಿ ಪೊಲೀಸರು ಸಮರ್ಪಕ ತೀರ್ಮಾನ ಕೈಗೊಳ್ಳಲಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ಪ್ರತಿಭಟನೆ ನಡೆಸುತ್ತಿರುವ ರೈತರು ನಾಲ್ಕು ದಿಕ್ಕುಗಳ ಗಡಿಗಳಿಂದ ಸಾವಿರಾರು ಟ್ರ್ಯಾಕ್ಟರ್ ಗಳ ಮೂಲಕ ದಿಲ್ಲಿಗೆ ಪ್ರವೇಶಿಸಲಿರುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ದಿಲ್ಲಿ ಪೊಲೀಸರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಬೋಬ್ಡೆ, “ಎಷ್ಟು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ, ಪರಿಸ್ಥಿತಿ ಯಾವ ರೀತಿ ಇರಬಹುದೆಂದು ಪೊಲೀಸರು ಅವಲೋಕನ ನಡೆಸಿ ತೀರ್ಮಾನ ಕೈಗೊಳ್ಳಬೇಕು” ಎಂದು ಹೇಳಿಕೆ ನೀಡಿದ್ದಾರೆ.

ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹಾಗೂ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ, “ರೈತರ ಟ್ರ್ಯಾಕ್ಟರ್ ರ‍್ಯಾಲಿಯಿಂದಾಗಿ ದೇಶಕ್ಕೆ ವಿಶ್ವಮಟ್ಟದಲ್ಲಿ ಮುಜುಗರ ಉಂಟಾಗುತ್ತದೆ. ರೈತರು ದಿಲ್ಲಿ ಪ್ರವೇಶಿಸದಂತೆ ತಡೆಯಬೇಕು ಎಂದು ಮನವಿ ಮಾಡಿದರು, ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠವು “ಪರಿಸ್ಥಿತಿ ಮತ್ತು ಕಾನೂನು ನಿಯಂತ್ರಣದ ಕುರಿತಾದಂತೆ ಪೊಲೀಸರಿಗೆ ಇರುವ ಹಕ್ಕಿನ ಕುರಿತು ನಾವು ಕೇಂದ್ರ ಸರಕಾರಕ್ಕೆ ವಿವರಿಸಿಕೊಡಬೇಕಾಗಿಲ್ಲ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News