ನಮ್ಮ ಸದಸ್ಯರು ಬೇರೆ ರಾಜಕೀಯ ಪಕ್ಷ ಸೇರಬಹುದು: ರಜನಿಕಾಂತ್ ಪಕ್ಷದಿಂದ ಸ್ಪಷ್ಟನೆ

Update: 2021-01-18 08:07 GMT

ಚೆನ್ನೈ,ಜ.18: ತಮ್ಮ ಆರೋಗ್ಯದ ಕಾರಣಗಳನ್ನು ಮುಂದೊಡ್ಡಿ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ರಾಜಕೀಯ ಪ್ರವೇಶಿಸುವ ನಿರ್ಧಾರದಿಂದ ಹಿಂದೆ ಸರಿದ ಕೆಲವೇ ದಿನಗಳಲ್ಲಿ ಹೇಳಿಕೆ ನೀಡಿರುವ ನಟ ಸ್ಥಾಪಿಸಿರುವ ರಜಿನಿ ಮಕ್ಕಳ್ ಮಂಡ್ರಂ ಸಂಘಟನೆ, ತನ್ನ ಸದಸ್ಯರು ರಾಜೀನಾಮೆ ನೀಡಲು ಹಾಗೂ ಇತರ ಪಕ್ಷಗಳನ್ನು ಸೇರಲು ಸ್ವತಂತ್ರರು ಎಂದು ತಿಳಿಸಿದೆ. ತಮಿಳುನಾಡಿನ ಮುಖ್ಯ ವಿಪಕ್ಷವಾಗಿರುವ ಡಿಎಂಕೆಗೆ ಮಂಡ್ರಂನ ಕೆಲವು ಜಿಲ್ಲಾ ಪ್ರಮುಖರು ಸೇರ್ಪಡೆಗೊಂಡ ನಂತರ ಈ ಹೇಳಿಕೆ ಬಂದಿದೆ.

"ಅವರು ಇತರ ಪಕ್ಷಗಳನ್ನು ಸೇರಿದರೂ ಅವರು ಸದಾ ರಜಿನಿ ಅಭಿಮಾನಿಗಳು ಎಂಬುದನ್ನು ಅವರು ಮರೆಯಬಾರದ"' ಎಂದು ರಜಿನಿ ಮಕ್ಕಳ್ ಮಂಡ್ರಂ ಇಂದು ಹೇಳಿಕೆ ನೀಡಿದೆ.

ಎಪ್ಪತ್ತು ವರ್ಷದ ರಜಿನಿಕಾಂತ್ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಬೇರೆ ಪಕ್ಷವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವುದಿಲ್ಲ ಎಂದು ಸಂಘಟನೆಯ ಈ ಹೇಳಿಕೆ ಸೂಚ್ಯವಾಗಿ ತಿಳಿಸಿದೆ ಎಂದೇ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಕ್ರಿಯ ರಾಜಕಾರಣ ಪ್ರವೇಶಿಸುವುದಿಲ್ಲ ಎಂದು ಹೇಳಿರುವ ರಜನೀಕಾಂತ್ ಅವರು ತಮ್ಮ ಪಕ್ಷವನ್ನು ಬೆಂಬಲಿಸಬಹುದು ಎಂದು ಬಿಜೆಪಿಯ ಹಲವರು  ನಿರೀಕ್ಷೆಯಿಟ್ಟುಕೊಂಡಿದ್ದರು.

ರಜಿನಿಕಾಂತ್ ಅವರು ಇನ್ನೇನು ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆಂದು ಅವರ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸಿದ್ದಂತೆಯೇ ಕಳೆದ ತಿಂಗಳು ರಕ್ತದೊತ್ತಡದಲ್ಲಿನ ಏರುಪೇರಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರಜಿನಿ ನಂತರ ರಾಜಕೀಯ ಪ್ರವೇಶಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News