ಯುನಿಟಿ ಆಸ್ಪತ್ರೆಗೆ ಪ್ರತಿಷ್ಠಿತ ಎನ್‌ಎಬಿಎಚ್ ಮಾನ್ಯತೆ

Update: 2021-01-18 09:14 GMT

ಮಂಗಳೂರು, ಜ.18: ನಗರದ ಯುನಿಟಿ ಆಸ್ಪತ್ರೆಗೆ ಪ್ರತಿಷ್ಠಿತ ಎನ್‌ಎಬಿಎಚ್ ಮಾನ್ಯತೆ ದೊರಕಿದೆ. ಈ ಮಾನ್ಯತೆ ಈ 2020ರ ಡಿಸೆಂಬರ್ 2ರಿಂದ 2023ರ ಡಿಸೆಂಬರ್ 1ರವರೆಗೆ ಊರ್ಜಿತದಲ್ಲಿರುತ್ತದೆ.

ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಅಂಗಸಂಸ್ಥೆಯಾಗಿರುವ ನ್ಯಾಶನಲ್ ಎಕ್ರೆಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಆ್ಯಂಡ್ ಹೆಲ್ತ್ ಕೇರ್ ಪ್ರೊವೈಡರ್ಸ್‌ (ಎನ್‌ಎಬಿಎಚ್) ಆರೋಗ್ಯ ಸೇವಾ ಸಂಸ್ಥೆಗಳಿಗೆ ಮಾನ್ಯತೆ ಒದಗಿಸುವ ಸಂಸ್ಥೆಯಾಗಿದೆ. ಈ ಮಾನ್ಯತೆ ಪಡೆಯುವ ಆಸ್ಪತ್ರೆಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಲಭಿಸುತ್ತದೆ.

ಒಂದು ಆಸ್ಪತ್ರೆಯ ಪ್ರತಿಯೊಂದು ಕಾರ್ಯಕ್ಷೇತ್ರದಲ್ಲಿನ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಮಾನ್ಯತೆ ನೀಡಲಾಗುತ್ತದೆ.

ಯುನಿಟಿ ಆಸ್ಪತ್ರೆಯ ಎನ್‌ಎಬಿಎಚ್ ಮಾನ್ಯತೆ ಪ್ರಕ್ರಿಯೆ 2017ರಲ್ಲಿ ಆರಂಭಗೊಂಡಿತ್ತಲ್ಲದೆ 2018ರಲ್ಲಿ ಪ್ರವೇಶ ಮಟ್ಟದ ಎನ್‌ಎಬಿಎಚ್ ಮಾನ್ಯತೆ ಲಭಿಸಿತ್ತು. 2020ರಲ್ಲಿ ದೊರೆತ ಸಂಪೂರ್ಣ ಎನ್‌ಎಬಿಎಚ್ ಮಾನ್ಯತೆ ಆಸ್ಪತ್ರೆಯ ಇತಿಹಾಸದಲ್ಲಿ ಮೈಲಿಗಲ್ಲು ಎಂದು ಪರಿಗಣಿಸಲ್ಪಟ್ಟಿದೆ.

ದೇಶದಲ್ಲಿ ಇಲ್ಲಿಯ ತನಕ 725 ಆಸ್ಪತ್ರೆಗಳಿಗೆ ಮಾತ್ರ ಈ ಮಾನ್ಯತೆ ದೊರಕಿದ್ದು, ಈ ಪಟ್ಟಿಯಲ್ಲಿ ಯುನಿಟಿ ಆಸ್ಪತ್ರೆ 723ನೇ ಸ್ಥಾನದಲ್ಲಿದೆ.

ಆಸ್ಪತ್ರೆಯ ಮುಖ್ಯಸ್ಥರೂ ವೈದ್ಯಕೀಯ ನಿರ್ದೇಶಕರೂ ಆಗಿರುವ ಡಾ.ಸಿ.ಪಿ.ಹಬೀಬ್ ರಹ್ಮಾನ್ ನೇತೃತ್ವದಲ್ಲಿ ಯುನಿಟಿ ಆಸ್ಪತ್ರೆ 1978ರಲ್ಲಿ ಸ್ಥಾಪನೆಗೊಂಡಿತ್ತು. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅತ್ಯುತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಮಿತ ದರದಲ್ಲಿ ಒದಗಿಸುವ ಯುನಿಟಿ ಆಸ್ಪತ್ರೆ ಆರೋಗ್ಯ ಸೇವಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News