ಕೋಮು ಸೌಹಾರ್ದ ಕಾಪಾಡಲು ರಾಜ್ಯ ಅಲ್ಪ ಸಂಖ್ಯಾತರ ಆಯೋಗ ಆದ್ಯತೆ: ಅಬ್ದುಲ್ ಅಝೀಮ್

Update: 2021-01-18 09:34 GMT

ಮಂಗಳೂರು, ಜ.18: ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋಮು ಸೌಹಾರ್ದಕ್ಕೆ ಹಾನಿಯಾಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಾಕಷ್ಟು ಶೈಕ್ಷಣಿಕ ಜಾಗೃತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಕೋಮು ಸೌಹಾರ್ದ ಕಾಪಾಡಿಕೊಂಡರೆ ರಾಜ್ಯಕ್ಕೆ ಮಾದರಿಯಾಗಬಹುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೊಂದಿಗೆ ಕೋಮು ಸೌಹಾರ್ದ ಕಾಪಾಡಲು ಆಯೋಗ ಪ್ರಥಮ ಆದ್ಯತೆ ನೀಡುತ್ತದೆ. ಈ ನಿಟ್ಟಿನಲ್ಲಿ ಕೋಮು ಸೂಕ್ಷ್ಮ ಜಿಲ್ಲೆ ಗಳಿಗೆ ಅಧಿಕಾರಿ ಗಳನ್ನು ನೇಮಿಸುವಾಗ ದಕ್ಷ,ಪ್ರಾಮಾಣಿಕ ಸಮರ್ಥ ಅಧಿಕಾರಿಗಳ ಅಗತ್ಯವಿದೆ ಎಂದು ಅಬ್ದುಲ್ ಅಝೀಮ್ ಹೇಳಿದರು.

 ವಕ್ಫ್ ಭೂಮಿ ಅಕ್ರಮ ಪ್ರಕರಣಗಳ ಬಗ್ಗೆ ಮುಂದಿನ ಸದನದ ಅಧಿವೇಶನದಲ್ಲಿ ಚರ್ಚೆಯಾಗಲಿದೆ. ಈ ಬಗ್ಗೆ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ಹಾಗೂ ನೆರೆ ಸೇರಿದಂತೆ ವಿವಿಧ ಕಾರಣಗಳಿಂದ ರಾಜ್ಯಕ್ಕೆ ಎದುರಾಗಿರುವ ಆರ್ಥಿಕ ತೊಂದರೆಯಿಂದ ಕೆಲವು ಯೋಜನೆಗಳಿಗೆ ಅನುದಾನ ಕಡಿತವಾಗಿದೆ. ಇದರಿಂದಾಗಿ ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಯೋಜನೆಗಳಿಗೆ ಆಗಿರುವ ಸಮಸ್ಯೆಗಳ  ಬಗ್ಗೆ ಮುಖ್ಯಮಂತ್ರಿಯ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಅಬ್ದುಲ್ ಅಝೀಮ್ ತಿಳಿಸಿದ್ದಾರೆ.

*ಕೋರೋನ ನಿಯಂತ್ರಣ ಲಸಿಕೆಯಂತೆ ಭ್ರಷ್ಟಾಚಾರ ತಡೆಗೂ ಪರಿಣಾಮಕಾರಿ ಲಸಿಕೆಯ ರೀತಿಯ ಸೂಕ್ತ ಕ್ರಮ ದೇಶದಲ್ಲಿ ಜಾರಿಯಾಗಬೇಕಾಗಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಆಡಳಿತದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ಬಿ.ಅಬೂಬಕರ್, ಅಲ್ಪ ಸಂಖ್ಯಾತರ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಬಶೀರ್ ಬೈಕಂಪಾಡಿ, ಹೈದರ್  ಪರ್ತಿಪ್ಪಾಡಿ, ಶಹನವಾಝ್, ಜಮಾಲ್, ಹಮೀದ್, ಅಸ್ಗರ್ ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News