ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಹೆರಿಗೆ ನಡೆಸಿದ ವಿಕಲಾಂಗ ಲ್ಯಾಬ್ ಟೆಕ್ನೀಷಿಯನ್

Update: 2021-01-18 10:52 GMT
photo: timesofindia.com

ಹೊಸದಿಲ್ಲಿ,ಜ.18: ವೃತ್ತಿಯಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ಆಗಿದ್ದು, ದೈಹಿಕವಾಗಿ ವಿಕಲಾಂಗ ವ್ಯಕ್ತಿಯೋರ್ವರು ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಗೆ ಹೆರಿಗೆ ಕ್ರಿಯೆ ನಡೆಸಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ದಿಲ್ಲಿಯ ಚಾಂದನಿ ಚೌಕ್ ಪ್ರದೇಶದಲ್ಲಿರುವ ಉತ್ತರ ರೈಲ್ವೆ ದಿಲ್ಲಿ ವಿಭಾಗೀಯ ಆಸ್ಪತ್ರೆಯ ಪೆಥಾಲಜಿ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಸುನಿಲ್ ಪ್ರಜಾಪತಿ  ಅಂಗವಿಕಲರಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ದಿಲ್ಲಿ ವಿವಿಯಿಂದ ಎಲ್‍ಎಲ್‍ಬಿ ಶಿಕ್ಷಣ ಪೂರೈಸಿರುವ ಅವರು ಮಧ್ಯ ಪ್ರದೇಶದಲ್ಲಿನ ಸಾಗರದಲ್ಲಿರುವ ತಮ್ಮ ಹುಟ್ಟೂರಿಗೆ ಮದುವೆ ದಿನಾಂಕ ನಿರ್ಧರಿಸಲು ಮೂರು ದಿನಗಳ ರಜೆಯ ಮೇಲೆ ಮಧ್ಯ ಪ್ರದೇಶ್ ಸಂಪರ್ಕಕ್ರಾಂತಿ ಕೋವಿಡ್-19 ಸ್ಪೆಷಲ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಶನಿವಾರ ರಾತ್ರಿ ಪ್ರಯಾಣಿಸುತ್ತಿದ್ದರು.

ಈ ಸಂದರ್ಭ ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಸುಸೂತ್ರವಾಗಿ  ಹೆರಿಗೆ ನಡೆಸಿ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರ ನೆರವಿಗೆ ಬಂದಿದ್ದು ಶಾಲ್ ಒಂದರ ನೂಲು ಹಾಗೂ ಪ್ರಯಾಣಿಕರೊಬ್ಬರು ತಮ್ಮ ಶೇವಿಂಗ್ ಕಿಟ್‍ನಲ್ಲಿದ್ದ ಹಾಗೂ ಬಳಕೆ ಮಾಡದೇ ಇದ್ದ ಬ್ಲೇಡ್. ಜತೆಗೆ ಅವರು ಸೇವೆ ಸಲ್ಲಿಸುತ್ತಿದ್ದ ಆಸ್ಪತ್ರೆಯ ನೇತ್ರತಜ್ಞೆ ಡಾ ಸುಪರ್ಣ ಸೇನ್ ಅವರು ವೀಡಿಯೋ ಕಾಲ್ ಮೂಲಕ ಪ್ರಜಾಪತಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು. ಸುಮಾರು 30 ವರ್ಷದ ಮಹಿಳೆ ಈ ಹಿಂದೆ  ಮೂರು ಬಾರಿ ಗರ್ಭಪಾತಕ್ಕೊಳಗಾಗಿದ್ದರೂ ಸುನಿಲ್ ಪ್ರಜಾಪತಿ ಧೈರ್ಯದಿಂದ ಎದೆಗುಂದದೆ ಆಕೆಗೆ ಸಹಾಯ ಮಾಡಿದ್ದಾರೆ. ಇದೀಗ ತಾಯಿ ಮಗು ಆರೋಗ್ಯದಿಂದಿದ್ದಾರೆ ಎಂದು timesofindia.com ವರದಿ ಮಾಡಿದೆ.

ದಿಲ್ಲಿಯ ಹಜ್ರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಟ ರೈಲು ಫರೀದಾಬಾದ್ ಹಾದು ಹೋಗುತ್ತಿದ್ದ ಸಂದರ್ಭ ಸುನಿಲ್ ತಮ್ಮ ಊಟದ ಬುತ್ತಿಯನ್ನು ಇನ್ನೇನು ತೆರೆಯಬೇಕೆನ್ನುವಷ್ಟರಲ್ಲಿ ಹತ್ತಿರದ ಬರ್ತ್‍ನಿಂದ ಮಹಿಳೆಯೊಬ್ಬರು ನೋವಿನಿಂದ ಅಳುತ್ತಿರುವುದು ಅವರ ಗಮನಕ್ಕೆ ಬಂದಿತ್ತು. ಆಕೆ ತನ್ನ ಸೋದರ ಹಾಗೂ ಸಣ್ಣ ಮಗಳೊಂದಿಗೆ  ಪ್ರಯಾಣಿಸುತ್ತಿದ್ದರು. ಸುನಿಲ್ ಆಕೆಯನ್ನು ವಿಚಾರಿಸಿದಾಗ ಆಕೆ ಕಿರಣ್ (30) ಎಂದೂ ಪತಿ ಮನೆಗೆ ತೆರಳುತ್ತಿದ್ದರೆಂದೂ ತಿಳಿದು ಬಂದಿತ್ತು. ಜನವರಿ 20ರಂದು ಹೆರಿಗೆಯಾಗಬಹುದೆಂದು ವೈದ್ಯರು ಹೇಳಿದ್ದರೆಂದೂ ಮಹಿಳೆ ಸುನಿಲ್‍ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಆಕೆಗೆ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ ಸುನಿಲ್ ತಡ ಮಾಡದೆ ತಮ್ಮ ಆಸ್ಪತ್ರೆಯ ಹಿರಿಯ ವೈದ್ಯರನ್ನು ಸಂಪರ್ಕಿಸಿದ್ದರು. ಸಾಗರ್ ವಿವಿಯಿಂದ ಮೈಕ್ರೋಬಯಾಲಜಿಯಲ್ಲಿ ಬಿಎಸ್ಸಿ ಹಾಗೂ ಪಬ್ಲಿಕ್ ಅಡ್ಮಿನಿಸ್ಟ್ರೇಶನ್‍ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರುವ ಸುನಿಲ್ ಪ್ರಯಾಣಿಕರಿಂದ ನೂಲು ಹಾಗೂ ಬ್ಲೇಡ್ ಪಡೆದು ವೈದ್ಯೆ ಸುಪರ್ಣಾ ಸೇನ್ ಅವರ ವೀಡಿಯೋ ಕಾಲ್ ಮಾರ್ಗದರ್ಶನದಂತೆ ಹೆರಿಗೆ ನೆರವೇರಿಸಿದ್ದರು.

photo: timesofindia.com

ಈ ಸಂದರ್ಭ ಪ್ರಯಾಣಿಕರೊಬ್ಬರು ಮಥುರಾ ಜಂಕ್ಷನ್‍ನಲ್ಲಿ ರೈಲಿನ ಚೈನ್ ಎಳೆದಿದ್ದರಿಂದ ರೈಲು ಸ್ವಲ್ಪ ಸಮಯದಲ್ಲೇ ಪ್ರಯಾಣ ನಿಲ್ಲಿಸಿತ್ತು. ರೈಲ್ವೆ ಸುರಕ್ಷಾ ಪಡೆಯ ತಂಡ ಹಾಗೂ ಮಹಿಳಾ ಕಾನ್‍ಸ್ಟೇಬಲ್ ಒಬ್ಬರು ನಂತರ ಕಿರಣ್‍ಳನ್ನು ಮಥುರಾ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರು.

ತಮ್ಮ ಅಂಗವೈಕಲ್ಯದ ಹೊರತಾಗಿಯೂ ಇಂತಹ ಒಂದು ಸನ್ನಿವೇಶದಲ್ಲಿ ಸಮಯಪ್ರಜ್ಞೆ ಮೆರೆದು ಮಹಿಳೆಗೆ ಹೆರಿಗೆ ನೆರವೇರಿಸಿದ ಸುನಿಲ್ ಪ್ರಜಾಪತಿ ಎಲ್ಲರಿಂದಲೂ ಪ್ರಶಂಸೆ ಗಿಟ್ಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News