ಡಾ. ಬೈಕಾಡಿ ರವಿಶಂಕರ್ ರಾವ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Update: 2021-01-18 11:57 GMT

ಉಡುಪಿ, ಜ.18: ಜಗತ್ತಿನ ಪ್ರಪ್ರಥಮ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವೆಂದು ಖ್ಯಾತಿ ಹೊಂದಿರುವ ಲಂಡನ್‌ನ ರಾಯಲ್ ಮಾರ್ಸ್ಡೆನ್ ಆಸ್ಪತ್ರೆಯ ಅರಿವಳಿಕೆ ವಿಭಾಗದಲ್ಲಿ ಪರಿಣಿತ ವಿಶೇಷ ಸಲಹೆಗಾರರಾಗಿರುವ ಉಡುಪಿ ಜಿಲ್ಲೆ, ಬೈಕಾಡಿಯ ಡಾ.ರವಿಶಂಕರ್ ರಾವ್ ಅವರಿಗೆ ಅಂತಾರಾಷ್ಟ್ರೀಯ ಅರವಳಿಕೆ ತಜ್ಞರ ಸಂಘಟನೆಯಿಂದ ‘ಅಸೋಸಿಯೇಷನ್ ಅವಾರ್ಡ್’ ದೊರಕಿದೆ.

ಬೈಕಾಡಿಯಂಥ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಡಾ.ರವಿಶಂಕರ್ ರಾವ್ ಬೈಕಾಡಿ ಕಳೆದ 16 ವರ್ಷಗಳಿಂದ ಲಂಡನ್ ನಗರ ನಿವಾಸಿಯಾಗಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಅರಿವಳಿಕೆ ತಜ್ಞನಾಗಿ ಗುರುತಿಸಿ ಕೊಂಡಿದ್ದಾರೆ.

ಗಂಭೀರ ಸ್ವರೂಪದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಪೂರ್ವದಲ್ಲಿ ಹಾಗೂ ಶಸ್ತ್ರಚಿಕಿತ್ಸಾ ಸಂದರ್ಭದಲ್ಲಿ ಡಾ.ರವಿ ನೀಡುವ ಪರಿಣತ ಸಲಹೆ ಅತ್ಯಂತ ನಿರ್ಣಾಯಕವೆನಿಸಿದೆ. ಕ್ಯಾನ್ಸರ್ ರೋಗಿಗಳ ರಕ್ತ ಪರಿಚಲನೆ ಸುಧಾರಣೆ, ನಿರ್ವಹಣೆ, ರಕ್ತ ಕೊರತೆ ಎದುರಿಸುವ ರೋಗಿಗಳ ನಿರ್ಹಣೆಯಲ್ಲಿ ಇವರು ಸಿದ್ಧಹಸ್ತರು.

ಲಂಡನ್‌ನ ಅರಿವಳಿಕೆ ತಜ್ಞರ ಸಂಘಟನೆಯ ಪ್ರಮುಖ ರೂವಾರಿಯಾಗಿ ರಕ್ತ ಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಸಂಬಂಧದ ನಿರ್ವಹಣೆಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಯಲ್ಲಿ ಹಲವು ಮಹತ್ವದ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಕರ್ಣಾಟಕ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕರಾದ ಬೈಕಾಡಿ ಶ್ರೀನಿವಾಸ ರಾವ್ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರರಾದ ಡಾ. ರವಿಶಂಕರ್ ರಾವ್, ಬೈಕಾಡಿ ಹಿರಿಯ ಪ್ರಾಥಮಿಕ ಶಾಲೆ, ಬ್ರಹ್ಮಾವರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜು, ಬೆಂಗಳೂರು ಮೆಡಿಕಲ್ ಕಾಲೇಜು, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡಿದ್ದರು. ಲಂಡನ್‌ನ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ತರಬೇತಿ ಪಡೆದು, ಎಫ್‌ಆರ್‌ಸಿಎ ಪದವಿ ಗಳಿಸಿದ್ದರು. ಇವರು ಸ್ವಲ್ಪ ಕಾಲ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News