ವಿದೇಶಿ ವಿದ್ವಾಂಸರಿಗೆ ತುಳುವಿನ ಬಗೆಗೆ ಪ್ರೀತಿ, ಗೌರವವಿತ್ತು: ಮಂಗಳೂರು ವಿವಿ ಕುಲಪತಿ ಪ್ರೊ.ಯಡಪಡಿತ್ತಾಯ

Update: 2021-01-18 12:10 GMT

ಕೊಣಾಜೆ, ಜ.18: ಬ್ರಿಟನ್, ಜರ್ಮನ್, ಅಮೇರಿಕಾಗಳಿಂದ ಬಂದ ವಿದೇಶಿ ವಿದ್ವಾಂಸರಿಗೆ ತುಳುವಿನ ಬಗೆಗೆ ಕುತೂಹಲ, ಪ್ರೀತಿ ಗೌರವಗಳಿದ್ದವು. ಅಮೆರಿಕಾದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪೀಟರ್ ಜೆ.ಕ್ಲಾಸ್ ಬರೆದ ‘ತುಳುವ ದರ್ಶನ’ ಕೃತಿ ಅದಕ್ಕೆ ಸಾಕ್ಷಿ. ತುಳುನಾಡಿಗೆ ಬಂದು ಅಧ್ಯಯನ ಮಾಡಿ ಇಲ್ಲಿ ತಾನು ಕಂಡುಂಡ ಸತ್ಯಗಳನ್ನು, ವಿಶೇಷತೆಗಳನ್ನು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ಪ್ರೊ.ಎ.ವಿ ನಾವಡ ಮತ್ತು ಪ್ರೊ.ಸುಭಾಶ್ಚಂದ್ರ ಇವರು ಕನ್ನಡಾನುವಾದ ಮಾಡಿ ಮಹದುಪಕಾರ ಮಾಡಿದ್ದಾರೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ಹೇಳಿದರು.

ಸೋಮವಾರ ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಪ್ರಸಾರಾಂಗ ಪ್ರಕಟಿಸಿದ ಪ್ರೊ. ಎ ವಿ ನಾವಡ ಮತ್ತು ಪ್ರೊ ಸುಭಾಶ್ಚಂದ್ರ ಇವರು ಅನುವಾದಿಸಿದ ಪೀಟರ್ ಜೆ. ಕ್ಲಾಸ್ ಅವರ ‘ತುಳುವ ದರ್ಶನ’ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರೊ. ಎ ವಿ ನಾವಡ ಅವರು ಮಾತನಾಡಿ, ಜಾನಪದವನ್ನು ಕೇವಲ ಸಾಹಿತ್ಯದ ಭಾಗವಾಗಿ ನೋಡದೇ ಸಮಾಜಶಾಸ್ತ್ರ, ಮಾನವಶಾಸ್ತ್ರಗಳ ನೆಲೆಯಿಂದಲೂ ಅಧ್ಯಯನ ಮಾಡಬೇಕೆಂಬ ಚಿಂತನೆಯನ್ನು ಹೊಂದಿದ್ದ ಪೀಟರ್ ಜೆ.ಕ್ಲಾಸ್ ಮೂರು ದಶಕಗಳಿಗೂ ಹೆಚ್ಚು ಕಾಲ ತುಳುನಾಡಲ್ಲಿದ್ದು ಸಂಶೋಧನೆಯಲ್ಲಿ ತೊಡಗಿಕೊಂಡವರು. ತುಳುನಾಡಿನ ಮಾತೃಮೂಲೀಯ ವ್ಯವಸ್ಥೆ, ಬಂಧುತ್ವದ ನೆಲೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಈ ಕೃತಿ ತುಳು ಅಧ್ಯಯನಕ್ಕೆ ಪ್ರಮುಖ ಆಕರ ಕೃತಿ ಎಂದರು.

ಕುಲಸಚಿವ ಕೆ. ರಾಜು ಮೊಗವೀರ ಮಾತನಾಡಿ, ಸಂಶೋಧಕರಿಗೆ ಭಾಷೆ, ಗಡಿಗಳ ಮಿತಿಯಿಲ್ಲ. ಜರ್ಮನಿಯ ಮ್ಯಾಕ್ಸ್ ಮುಲ್ಲರ್ ಸಂಸ್ಕೃತವನ್ನು, ಅಮೆರಿಕದ ಪೀಟರ್ ತುಳುವನ್ನು ಹುಡುಕಿಕೊಂಡು ಬಂದುದೇ ಅದಕೆ ಸಾಕ್ಷಿ ಎಂದರು.

ಮಂಗಳೂರು ವಿವಿಯ ಹಣಕಾಸು ಅಧಿಕಾರಿ ಪ್ರೊ.ಬಿ ನಾರಾಯಣ, ಪ್ರಸಾರಾಂಗದ ನಿರ್ದೇಶಕ ಪ್ರೊ. ಅಭಯಕುಮಾರ್, ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಪ್ರೊ.ನಾಗಪ್ಪ ಗೌಡ, ಪ್ರೊ.ಪ್ರಶಾಂತ ನಾಯ್ಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News