ಭಾರತ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಫಲಾನುಭವಿಗಳು

Update: 2021-01-18 15:05 GMT

ಹೊಸದಿಲ್ಲಿ,ಜ.18: ಭಾರತ ಬಯೊಟೆಕ್ ತಯಾರಿಕೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆಯಲು ಬಿಹಾರ,ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿಯ ಫಲಾನುಭವಿಗಳು ಹಿಂದೇಟು ಹೊಡೆಯುತ್ತಿದ್ದಾರೆ. ಇದರ ಪರಿಣಾಮವಾಗಿ ಲಸಿಕೆ ಅಭಿಯಾನ ಆರಂಭಗೊಂಡ ಮೊದಲ ದಿನವೇ ಲಸಿಕೆಯನ್ನು ಪಡೆದುಕೊಂಡ ಫಲಾನುಭವಿಗಳ ಸಂಖ್ಯೆ ಶೇ.50ಕ್ಕೂ ಕಡಿಮೆಯಾಗಿತ್ತು.

ಶನಿವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಮನ್ವಯ ಸಭೆಯಲ್ಲಿ ರಾಜ್ಯಗಳು ಈ ವಿಷಯವನ್ನು ಪ್ರಸ್ತಾಪಿಸಿದ್ದವು.

ತಮಿಳುನಾಡಿನಲ್ಲಿ ಮೊದಲ ದಿನ ಯೋಜಿತ 600 ಕೋವ್ಯಾಕ್ಸಿನ್ ಡೋಸ್‌ಗಳ ಪೈಕಿ ಕೇವಲ 99 ಡೋಸ್‌ಗಳನ್ನು ನೀಡಲಾಗಿತ್ತು, ಮರುದಿನ ಅಪರಾಹ್ನ ಎರಡು ಗಂಟೆಯವರೆಗೆ ಇನ್ನೂ 90 ಡೋಸ್‌ಗಳನ್ನು ಫಲಾನುಭವಿಗಳಿಗೆ ನೀಡಲಾಗಿತ್ತು. ಒಟ್ಟು 11 ರಾಜ್ಯಗಳು ಕೋವ್ಯಾಕ್ಸಿನ್ ಲಸಿಕೆಯ ಬಳಕೆಗೆ ಒಪ್ಪಿಕೊಂಡಿದ್ದವು. ಇತರ ರಾಜ್ಯಗಳಲ್ಲಿಯೂ ಕೋವ್ಯಾಕ್ಸಿನ್ ಲಸಿಕೆಯ ನೀಡಿಕೆ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿದೆ.

ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲವಾದರೂ ಜನರು ಅದನ್ನು ಪಡೆದುಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ರಾಜಸ್ಥಾನದ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನರೇಶ ಠಕ್ರಾಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಇನ್ನೂ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಹಂತದಲ್ಲಿರುವ ಕೋವ್ಯಾಕ್ಸಿನ್‌ನ ಪರಿಣಾಮಕಾರಿತ್ವದ ಬಗ್ಗೆ ಹಲವಾರು ರಾಜಕಾರಣಿಗಳು ಮತ್ತು ತಜ್ಞರು ಪ್ರಶ್ನೆಗಳನ್ನೆತ್ತಿದ್ದರು.

 ತನ್ಮಧ್ಯೆ ರವಿವಾರ ರಾತ್ರಿ ಸಂಭವಿಸಿದ ಉತ್ತರ ಪ್ರದೇಶದ ಮೊರಾದಾಬಾದ್‌ನ ದೀನದಯಾಳ ಸರಕಾರಿ ಆಸ್ಪತ್ರೆಯ ವಾರ್ಡ್‌ಬಾಯ್ ಮಹಿಪಾಲ್ ಸಾವಿಗೂ ಕೊರೋನ ವೈರಸ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ಆತನ ಸಾವು ಹೃದಯ ಸಮಸ್ಯೆಯಿಂದ ಉಂಟಾಗಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ಈ ಕುರಿತು ಮಾಧ್ಯಮ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಅದು ಹೇಳಿದೆ. ಮಹಿಪಾಲ ಶನಿವಾರ ಲಸಿಕೆಯನ್ನು ಪಡೆದುಕೊಂಡಿದ್ದರು.

ಮರಣೋತ್ತರ ಪರೀಕ್ಷೆ ವರದಿಯಂತೆ ಮಹಿಪಾಲನ ಹೃದಯವು ದೊಡ್ಡದಾಗಿತ್ತು ಮತ್ತು ಅದರಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೃದಯರೋಗದಿಂದ ಆತನ ಸಾವು ಸಂಭವಿಸಿರುವಂತಿದೆ ಎಂದು ದೀನದಯಾಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಿಲಿಂದಚಂದ್ರ ಗರ್ಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News