ಗಾಂಧೀಜಿಯ ಎಲ್ಲಾ ಕನಸುಗಳು ರಾಜ್ಯದಲ್ಲಿ ಸಾಕಾರ : ಸಿಎಂ ಯಡಿಯೂರಪ್ಪ

Update: 2021-01-18 15:27 GMT

ಉಡುಪಿ, ಜ.18: ಮಹಾತ್ಮ ಗಾಂಧಿ ಅವರು ಕಂಡ ಗ್ರಾಮರಾಜ್ಯ- ರಾಮರಾಜ್ಯದ ಕನಸು ಈಗ ಸಾಕಾರಗೊಳ್ಳುತ್ತಿದೆ. ಅದೇ ರೀತಿ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳ್ಳುವ ಮೂಲಕ ಮಹಾತ್ಮಗಾಂಧಿ ಅವರ ಎಲ್ಲಾ ಆಶಯಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿ ನಾನಿಲ್ಲಿಗೆ ಬಂದಿದ್ದೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಪದ್ಧತಿಯ ಪಂಚ ಶತಮಾನೋತ್ಸವ ದಂಗವಾಗಿ ಪರ್ಯಾಯ ಅದಮಾರು ಮಠದ ವತಿಯಿಂದ ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ನೂತನವಾಗಿ ನಿರ್ಮಿಸಿರುವ ‘ವಿಶ್ವಪಥ’ವನ್ನು ಉದ್ಘಾಟಿಸಿ, ರಾಜಾಂಗಣದ ಶ್ರೀನರಹರಿ ತೀರ್ಥ ವೇದಿಕೆಯಲ್ಲಿ ಆಯೋಜಿಸಿರುವ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯದ 500ನೇ ವರ್ಷಾಚರಣೆಯನ್ನು ಉದ್ಘೋಷಿಸಿ ಅವರು ಮಾತನಾಡುತಿದ್ದರು.

ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಅದನ್ನು ತಡೆಗಟ್ಟುವ ಪ್ರಯತ್ನ ವನ್ನು ನನ್ನ ಶಕ್ತಿಮೀರಿ ಪ್ರಾಮಾಣಿಕವಾಗಿ ಮಾಡಿದ್ದೇನೆ. ಈ ಎಲ್ಲಾ ಸಂಕಷ್ಟಗಳಿಂದ ರಾಜ್ಯದ ಜನತೆಯನ್ನು ಪಾರುಮಾಡಲು, ರಾಜ್ಯದಲ್ಲಿ ಮಳೆ-ಬೆಳೆಯಾಗಿ ಕೆರೆಕಟ್ಟೆ ಗಳೆಲ್ಲಾ ತುಂಬಿ, ರೈತರು ಸುಖಿಯಾಗಿ ಬದುಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಅಷ್ಟಮಠಗಳ ಧರ್ಮ ಸಂರಕ್ಷಣೆಯೊಂದಿಗೆ ಸಮಾಜಮುಖಿ ಕಾರ್ಯಕ್ಕೆ ಸರಕಾರದ ಸಂಪೂರ್ಣ ಬೆಂಬಲವಿದೆ ಎಂದವರು ಹೇಳಿದರು.

ಉಡುಪಿಯ ಅಷ್ಟಮಠಗಳು ಧರ್ಮದ ರಕ್ಷಣೆ ಹಾಗೂ ಸಮಾಜಕ್ಕೆ ನೀಡಿರುವ ಸೇವೆ ಅನನ್ಯ ಎಂದು ಬಣ್ಣಿಸಿದ ಯಡಿಯೂರಪ್ಪ, ವರ್ಷದ ಹಿಂದೆ ನಿಧನರಾದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರನ್ನು ನೆನಪಿಸಿಕೊಂಡರು.ಅಯೋಧ್ಯೆಯಲ್ಲಿ ‘ಆ’ ಕಟ್ಟಡ ಕೆಡವಿದ ಬಳಿಕ ಅದೇ ಜಾಗದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯನ್ನು ಪೇಜಾವರಶ್ರೀಗಳು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಅಲ್ಲಿರುವ ಅದೃಷ್ಠ ಪೂರ್ವಜನ್ಮದ ಸುಕೃತದಿಂದ ನನಗೆ ಪ್ರಾಪ್ತಿಯಾಗಿ್ತು ಎಂದು ಯಡಿಯೂರಪ್ಪ ತಿಳಿಸಿದರು.

ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು. ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿಗಲಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಪರ್ಯಾಯ ಪಂಚಶತಮಾನೋತ್ಸವದ ಅಂಗವಾಗಿ ಜೋಡುಕಟ್ಟೆಯಿಂದ ಆಯೋಜಿಸಲಾದ ಆಕರ್ಷಕ ಮೆರವಣಿಗೆಯನ್ನು ಉದ್ಘಾಟಿಸಿದ ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಮಾಜಿ ಸಚಿವ ಜೀವರಾಜ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಹಾಗೂ ಸಿಇಓ ರಾಜಕಿರಣ್ ರೈ, ಕಟೀಲಿನ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅವರು ಉಪಸ್ಥಿತರಿದ್ದರು.

ಸಮ್ಮಾನ ಕಾರ್ಯಕ್ರಮದಲ್ಲಿ ಸಾಧಕರಾದ ಹೆರಂಜೆ ಕೃಷ್ಣ ಭಟ್, ಅಚ್ಚುತ ಭಟ್ ಉಡುಪಿ, ಭುವನೇಂದ್ರ ಕಿದಿಯೂರು, ದೈವಜ್ಞ ಬ್ರಾಹ್ಮಣ ಸಂಘ ಉಡುಪಿ, ದೈವಜ್ಞ ಬ್ರಾಹ್ಮಣ ಯುವಕ ಸಂಘಗಳನ್ನು ಸನ್ಮಾನಿಸಲಾಯಿತು.

ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ಅತಿಥಿಗಳನ್ನು ಸ್ವಾಗತಿಸಿದರೆ, ಕೃಷ್ಣರಾಜ್ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News