ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಹತ್ಯೆ: ಮೂವರ ಬಂಧನ

Update: 2021-01-18 16:05 GMT

ಲಕ್ನೊ: ಉತ್ತರಪ್ರದೇಶದ ಮಹೋಬಾದ 16ರ ವಯಸ್ಸಿನ ದಲಿತ ಬಾಲಕಿಯನ್ನು ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಳೆದ ಶನಿವಾರ ದಿನಸಿ ತರಲು ಮನೆಯಿಂದ ಹೊರಹೋಗಿದ್ದ 12ನೇ ತರಗತಿಯ ವಿದ್ಯಾರ್ಥಿನಿ ಮತ್ತೆ ವಾಪಸಾಗಿರಲಿಲ್ಲ. ಮರುದಿನ ಬಾಲಕಿಯ ಶವ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ

ನಮ್ಮ ನೆರೆಹೊರೆಯ ಯುವಕರು ಬಾಲಕಿಗೆ ಕಿರುಕುಳ ನೀಡುತ್ತಿದ್ದರು. ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ನಡೆಸಿದ ಬಳಿಕ ಆಕೆಯ ಶವವನ್ನು ಮರಕ್ಕೆ ನೇತುಹಾಕಲಾಗಿದೆ ಎಂದು ಸಂತ್ರಸ್ತ ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ.

“ಅವರು ನನ್ನ ಮಗಳನ್ನು ಬಲವಂತವಾಗಿ ಕರೆದೊಯ್ದರು..ನೇಣು ಹಾಕಿದರು.. ಅವಳನ್ನು ಹತ್ಯೆಗೈದರು. ಸ್ಥಳೀಯರಾದ ಭೂರಾ, ತರುಣ್, ಭೂಪೇಂದ್ರ ಈ ಅಪರಾಧ ಎಸಗಿದ್ದಾರೆ’’ ಎಂದು ಸಂತ್ರಸ್ತೆಯ ತಾಯಿ ಎನ್ ಡಿಟಿವಿಗೆ ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯ ಕುಟುಂಬದವರು ಇಂದು ದೂರು ಸಲ್ಲಿಸಿದ್ದಾರೆ. ಅವರು ಹೆಸರಿಸಿದ ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗೌತಮ್ ಹೇಳಿದ್ದಾರೆ.

ಉತ್ತರಪ್ರದೇಶದ ಹತ್ರಸ್ ನಲ್ಲಿ ದಲಿತ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ನಡೆದ ಕೆಲವು ತಿಂಗಳ ಬಳಿಕ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News